ತಾಲ್ಲೂಕಿನಾದ್ಯಂತ ಶಿವರಾತ್ರಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಾಶಿವರ್ರಾತಿಯಂದು ನಗರದಲ್ಲಿರುವ ಕೋಟೆ ಸೋಮೆಶ್ವರ, ಪೇಟೆ ನಗರೇಶ್ವರ, ಅಶೋಕ ರಸ್ತೆಯ ಕಾಶಿ ವಿಶ್ವನಾಥೇಶ್ವರ, ಅಗ್ರಹಾರದ ಶಂಕರ ಮಠದಲ್ಲಿನ ಏಕಾಂಭರೇಶ್ವರ ಮತ್ತು ಶಾಮಣ್ಣಬಾವಿ ಬಳಿಯ ಜಲಕಂಠೇಶ್ವರ ದರ್ಶನ ಪಡೆದಲ್ಲಿ ಕೈಲಾಸ ಪ್ರಾಪ್ತಿ ಎಂಬ ಪ್ರತೀತಿ ಇದ್ದು ನೂರಾರು ಜನ ಭಕ್ತರು ನಗರದಲ್ಲಿನ ಪಂಚಲಿಂಗ ದರ್ಶನ ಪಡೆದರು.
ಇದಲ್ಲದೆ, ಮಯೂರ ವೃತ್ತದ ಬಳಿಯ ಚಂದ್ರಶೇಖರ, ಬೂದಾಳದ ಮಲೆಮಲ್ಲೇಶ್ವರ, ವೀರಾಪುರದ ಗವಿಗಂಗಾಧರೇಶ್ವರ, ಬಟ್ರೇನಹಳ್ಳಿಯ ಸಾಯಿಬಾಬ ಮಂದಿರದಲ್ಲಿರುವ ಜಲಕಂಠೇಶ್ವರ ಮುಂತಾದ ಪ್ರಮುಖ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಶಿವಪಾರ್ವತಿ ಮತ್ತು ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ಈ ಕೃಷ್ಣ ಪಕ್ಷದ ಕೊನೆಯ ದಿನದಂದು ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಇಂತಹ ಹವಾಮಾನ ವ್ಯತ್ಯಯದ ದಿನಗಳಲ್ಲಿ ನಮ್ಮ ದೇಹ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ದಿನ ನಾವು ಮಾಡುವ ಶಿವಪೂಜೆ ಮತ್ತು ಉಪವಾಸ ದೇಹಕ್ಕೆ ತುಂಬಾ ಉಪಯುಕ್ತ ಎಂದು ಅರ್ಚಕರು ತಿಳಿಸಿದರು.
- Advertisement -
- Advertisement -
- Advertisement -