ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದ ಪಕ್ಕದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಲುಷಿತ ನೀರಿನ ಸೇವನೆಯಿಂದ ಸಾರ್ವಜನಿಕರು ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದು ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ನಗರಸಭೆ ಅಧಿಕಾರಿಗಳು ಸೇರಿದಂತೆ ನಾಗರಿಕರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ದ ನೀರಿನ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಮುಖಂಡರಾದ ಲಕ್ಷ್ಮಿನಾರಾಯಣ (ಲಚ್ಚಿ), ಸೀನಪ್ಪ, ಶ್ರೀನಿವಾಸ್ (ಚಿನ್ನಿ), ಕೇಶವಣ್ಣ, ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್, ತುಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುರೇಂದ್ರಗೌಡ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜ್‌ರಾವ್, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -