ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶುದ್ಧ ನೀರಿನ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಕಳಿಸುವ ಮೂಲಕ ಹಾಗೂ ಈ ಕುರಿತಂತೆ ಮನೆಗೊಂದು ಕರಪತ್ರ ತಲುಪಿಸುವ ಮೂಲಕ ನಡೆಸುತ್ತಿರುವುದಾಗಿ ಸಾಹಿತಿ ಸ.ರಘುನಾಥ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಜಿಲ್ಲೆಗೆ ನೀರಿನ ಅಗತ್ಯತೆಯ ಕುರಿತಂತೆ ಕರಪತ್ರಗಳನ್ನು ಹಂಚುವ ಮೂಲಕ ನಡೆಸಿದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿಗಳಿಗೆ ‘ಹರಿದು ಬರದಿರಲಿ ವಿಷದ ಕೊಳಚೆ, ಹರಿಸಿ ತನ್ನಿ ಶುದ್ಧ ನೀರಿನ ಹೊಳೆ’, ‘ಶುದ್ಧ ನೀರು ಕೊಡಿ, ಬದುಕಿಗೆ ಬೇಸಾಯಕ್ಕೆ’ ಎಂದು ಬರೆದಿರುವ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಕಳುಹಿಸಲಾಗುವುದು. ಕರಪತ್ರವನ್ನು ವಿದ್ಯಾರ್ಥಿಗಳ ಮೂಲಕ ಮನೆಮನೆಗೂ ತಲುಪಿಸಿ ಶುದ್ಧವಾದ ನೀರಿನ ಮಹತ್ವ ಮತ್ತು ಅಗತ್ಯದ ಬಗ್ಗೆ ತಿಳಿಸುವಂತೆ ಕೋರಲಾಗುತ್ತಿದೆ. ಇದರೊಂದಿಗೆ ಅಸ್ಪೃಶ್ಯತಾ ನಿವಾರಣೆಗೆ ಪ್ರತಿಜ್ಞಾ ವಿಧಿಯನ್ನು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಹಸಿರುಹೊನ್ನು ಬಳಗ ಮತ್ತು ಡಾ.ಶಿವಪ್ಪ ಅವರಿಂದ ಆರಂಭಗೊಂಡ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮ ಜೊತೆಯಾಗಿ ‘ನೀರು ಮತ್ತು ಅಸ್ಪೃಶ್ಯತೆ’ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ. ಹಸುರನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಈ ನಾಡಿಗೆ ಹಾಲು, ರೇಷ್ಮೆ , ಚಿನ್ನ, ತರಕಾರಿ ಮುಂತಾದ ಕೊಡುಗೆಯನ್ನು ಕೊಟ್ಟಿರುವಾಗ, ನಾಡಿನ ನದಿ ನೀರಿನಲ್ಲಿ ಪಾಲನ್ನು ಏಕೆ ಕೊಡುತ್ತಿಲ್ಲ. ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ 30 ಕಾಲೇಜುಗಳಲ್ಲಿ, 25 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕರಪತ್ರಗಳನ್ನು ಹಂಚಿ, ಅಂಚೆ ಕಾರ್ಡುಗಳನ್ನು ಬರೆಸಲಾಗಿದೆ. ಸುಮಾರು 60 ಸಾವಿರ ಕರಪತ್ರಗಳು ಮನೆಗಳಿಗೆ ತಲುಪಿವೆ. 30 ಸಾವಿರ ಅಂಚೆ ಕಾರ್ಡುಗಳು ಸಿದ್ಧವಾಗಿದ್ದಾವೆ. 50 ಸಾವಿರ ಕಾರ್ಡುಗಳು ಸಿದ್ಧವಾದೊಡನೆ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮುತ್ತೂರು ಮತ್ತು ಮೇಲೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಅಭಿಯಾನವನ್ನು ನಡೆಸಿರುವುದಾಗಿ ಹೇಳಿದರು.
ಮುಳಬಾಗಿಲು ಡಾ.ಅರಿವು ಶಿವಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಪ್ರಾಧ್ಯಾಪಕ ಶಿವಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -