ಸಮಾಜದಲ್ಲಿ ಪುರುಷರಷ್ಟೆ ಸಮಾನತೆಯನ್ನು ಹೆಣ್ಣು ಮಕ್ಕಳಿಗೆ ಕಲ್ಪಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರದ ಸಹಯೋಗದಲ್ಲಿ ನಡೆದ ‘ಪ್ರೋಟೆಕ್ಷನ್ ಆಫ್ ವುಮೆನ್ ಫ್ರಮ್ ಡೊಮೆಸ್ಟಿಕ್ ವೈಯಲೆನ್ಸ್’ ಕುರಿತಂತೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಾಯಂದಿರು ಕುಟುಂಬಗಳಲ್ಲಿ ಗಂಡು ಹೆಣ್ಣು ಮಕ್ಕಳೆಂಬ ಬೇದಭಾವವನ್ನು ತೋರಿಸದೆ, ಇಬ್ಬರನ್ನೂ ಸಮಾನತೆಯಿಂದ ಕಾಣಬೇಕು. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರೊಂದಿಗೆ ಹೇಗೆ ವರ್ತನೆ ಮಾಡಬೇಕೆಂಬುದರ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ತಿಳಿಹೇಳಬೇಕು. ಸಂಸ್ಕಾರಭರಿತವಾದ ಶಿಕ್ಷಣವನ್ನು ನೀಡಿದಾಗ ಮಾತ್ರ, ಸಮಾಜದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳು ದಬ್ಬಾಳಿಕೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದಂತಹ ಎಲ್ಲಾ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ಕೆಲವು ಮಂದಿ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಸಿಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಮಹಿಳಾ ಮೀಸಲಾತಿ ಹಾಗೂ ಅವರಿಗೆ ನೀಡಿರುವ ಸ್ವಾತಂತ್ರ್ಯವನ್ನು ಕಸಿಯುವಂತಹ ಪ್ರಯತ್ನಗಳಾಗಬಾರದು. ಹೆಣ್ಣು ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಕಂಕಣಬದ್ಧರಾಗಬೇಕು ಎಂದರು.
ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ, ಮಹಿಳಾ ಸಾಂತ್ವನಕೇಂದ್ರದ ಅಧ್ಯಕ್ಷೆ ಡಾ.ವಿಜಯಾವೆಂಕಟರಾಮ್, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಸುಬ್ರಮಣ್ಯಪ್ಪ, ವೇಣುಗೋಪಾಲ್, ಮೇಲ್ವಿಚಾರಕಿ ಗಿರಿಜಾಂಬಿಕೆ, ತಾಲ್ಲೂಕು ಪಂಚಾಯತಿ ಸದಸ್ಯೆ ಸರಸ್ವತಮ್ಮ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -