23.1 C
Sidlaghatta
Monday, August 8, 2022

ಸರ್ಕಾರದಿಂದ ಬಿಡುಗಡೆಯಾಗುವ ಹಣ ಬಳಕೆಯಾಗುತ್ತಿಲ್ಲ

- Advertisement -
- Advertisement -

ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿ ವತಿಯಿಂದ ಬಸವಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ಇದುವರೆಗೂ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಬಸವ ಜಯಂತಿ ಮತ್ತು ಭಗೀರಥ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಲವು ದಶಕಗಳಿಂದ ನಗರದ ಅರಳೇಪೇಟೆಯಲ್ಲಿರುವ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಸವ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೆಲವು ವರ್ಷಗಳಿಂದ ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿಯ ಜೊತೆಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿದ್ದರೂ ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ನೀಡುತ್ತಿಲ್ಲ. ನಮ್ಮಿಂದ ರಸೀದಿಗಳನ್ನು ಪಡೆಯುವ ಅಧಿಕಾರಿಗಳು ಹಣವನ್ನು ಯಾವುದಕ್ಕೆ ಖರ್ಚು ಮಾಡಿರುವಿರಿ ಎಂದಾದರೂ ತಿಳಿಸಬೇಕೆಂದು ಕೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಮಾತನಾಡಿ, ಕಳೆದ ವರ್ಷ ಹಣ ಖರ್ಚು ಮಾಡಿಲ್ಲ. ತಹಶಿಲ್ದಾರರಿಗೆ ವಿಷಯ ತಿಳಿಸಿ ಹಣವನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ಈ ಬಾರಿಯ ಬಸವ ಜಯಂತ್ಯುತ್ಸವವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬಸವೇಶ್ವರ ಸೇವಾ ಟ್ರಸ್ಟ್ ಜೊತೆಗೂಡಿ ಮೇ 9 ಮತ್ತು 10, ಎರಡು ದಿನಗಳ ಕಾಲ ಆಚರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಗೀರಥ ಜಯಂತಿಯನ್ನು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿಯೇ ಮೇ 13 ರಂದು ಆಚರಿಸುವುದು. ಸರ್ಕಾರದಿಂದ ಬರುವ 25 ಸಾವಿರ ರೂಗಳ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಜಯಂತ್ಯುತ್ಸವವನ್ನು ಯಶಸ್ವಿಯಾಗಿ ಆಚರಿಸಬೇಕೆಂದು ತೀರ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಉಪ ತಹಶೀಲ್ದಾರ್ ಮುನಿಕೃಷ್ಣಪ್ಪ, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಶಿರಸ್ತೇದಾರರಾದ ಲಕ್ಷ್ಮೀಕಾಂತಮ್ಮ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here