ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರ ಜನರನ್ನು ದಿಕ್ಕುತಪ್ಪಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ನಾಗರೀಕರು ಪ್ರಮಾಣವಚನ ಸ್ವೀಕಾರ ಮಾಡಿದರು.
ತಾಲ್ಲೂಕಿನ ಈ-ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಘಟಕ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರಿಂದ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಮುಂಬರುವ ಚುನಾವಣೆಯಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ, ನೀರಿಗಾಗಿ ಹೋರಾಟಕ್ಕೆ ಇಳಿಯುವುದಾಗಿ ಪ್ರತಿಜ್ಞೆ ಮಾಡಿದರು.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ನೀರಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ಕೂಡಾ, ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಗಳ ಸಮಯದಲ್ಲಿ ನಮ್ಮ ಬಲಹೀನತೆ ಎಂಬಂತೆ ನೀರಾವರಿ ಯೋಜನೆಗಳನ್ನೆ ಚುನಾವಣೆಯ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಚುನಾವಣೆಗಳಲ್ಲಿ ಗೆದ್ದ ಮೇಲೆ ನಮ್ಮ ಕಡೆಗೆ ತಿರುಗಿಯೂ ನೋಡದೆ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾರೆ.
ಈ ಭಾಗದಿಂದ ಆಯ್ಕೆಯಾಗಿ ಹೋದಂತಹ ಜನಪ್ರತಿನಿಧಿಗಳೂ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರುವಂತಹ ಶಕ್ತಿಯನ್ನು ಕಳೆದುಕೊಂಡು ನಿಸ್ಪ್ರಯೋಜಕರಾಗಿದ್ದಾರೆ. ಚುನಾವಣೆಗಳಲ್ಲಿ ಮತದಾನ ಮಾಡಿದರೂ ಕೂಡಾ ನಮಗೆ ಯಾವುದೇ ಪ್ರಯೋಜನವಿಲ್ಲದಿರುವಾಗ ಮತದಾನ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಜನತೆಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು, ಉಚಿತವಾಗಿ ಅಕ್ಕಿಯನ್ನು ಕೊಡುತ್ತಿದ್ದಾರೆ, ನಮಗೆ ನೀರು ಕೊಡಲು ಸಾಧ್ಯವಾಗದೆ ಕೇವಲ ಅಕ್ಕಿಯನ್ನು ಕೊಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ತರಾತುರಿಯಲ್ಲಿ ಮತಗಳನ್ನು ಗಳಿಸಿಕೊಳ್ಳುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕುವ ಮುಖಾಂತರ ಈ ಜನರ ಭಾವನೆಗಳನ್ನು ಕಡೆಗಣಿಸಿದರು. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರದ ಭಾಗಗಳಿಗೆ ನೀರು ಬರುವುದಿಲ್ಲ, ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ, ಹೇಳಿಕೆ ನೀಡಿದ್ದಾರೆ.
ಎತ್ತಿನಹೊಳೆಯೋಜನೆಯ ನೀರು ಬರುವುದಿಲ್ಲವೆಂದು ಗೊತ್ತಾದ ಮೇಲೆ ಸರ್ಕಾರ ಈ ಭಾಗದ ಜನರನ್ನು ದಿಕ್ಕು ತಪ್ಪಿಸಲು ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಯಲು ಸೀಮೆಯ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸುವ ನಾಟಕವಾಡುತ್ತಿದ್ದು, ಸರ್ಕಾರದ ಉದ್ದೇಶ ಸ್ಪಷ್ಟವಾಗುತ್ತಿದೆ, ಆದ್ದರಿಂದ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮ ಪಂಚಾಯತಿಯ ಮುಖಂಡರೂ ಸೇರಿದಂತೆ ನಾಗರಿಕರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಳ್ಳೂರು ಹರೀಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಚಲಪತಿ, ವೆಂಕಟಸ್ವಾಮಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಾಥ್, ಕದಿರಪ್ಪ, ಯುವಶಕ್ತಿ ಘಟಕದ ಮುಖಂಡರಾದ ವಿಜಯಭಾವರೆಡ್ಡಿ, ಪ್ರತಾಪ್ರೆಡ್ಡಿ, ಶಿವಕುಮಾರ್, ಮುನಿರೆಡ್ಡಿ, ವಿಶ್ವನಾಥ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -