ಸರ್ಕಾರಿ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿರುವವರನ್ನು ಕೂಡಲೇ ಬಂಧಿಸಿ, ಅವರ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿ ಎಸ್.ಎಫ್.ಐ.ಸಂಘಟನೆ ಹಾಗೂ ಡಿ.ವೈ.ಎಫ್.ಐ.ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಐ.ಟಿ.ಐ.ಕಾಲೇಜಿಗೆ ಗ್ರಾಮಾಂತರ ಪ್ರದೇಶಗಳಿಂದ ಹೆಣ್ಣು ಮಕ್ಕಳೂ ಸೇರಿದಂತೆ ನೂರಾರು ಬಡಕುಟುಂಬಗಳಿಂದ ವಿದ್ಯಾರ್ಥಿಗಳು ಬರುತ್ತಾರೆ, ಕಾಲೇಜಿನಲ್ಲಿ ೪೦೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದಾರೆ, ಕೆಲವು ಮಂದಿ ಕಿಡಿಗೇಡಿಗಳು ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಮಾಡುವುದು ಮಾನಸಿಕವಾಗಿ ಕಿರುಕುಳ ನೀಡುವುದು, ಸೇರಿದಂತೆ ದೈಹಿಕವಾಗಿ ಹಲ್ಲೆ ನಡೆಸುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಬುಧವಾರದಂದು ಕೂಡಾ ಕಾಲೇಜು ಮುಗಿಸಿಕೊಂಡು ವಾಪಸ್ಸು ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಗಲಾಟೆ ತೆಗೆದಿರುವ ಕೆಲ ಪುಂಡರು ಏಕಾಏಕಿ ಹಲ್ಲೆ ನಡೆಸಿದ್ದಾರೆ, ಈ ರೀತಿಯಾಗಿ ನಗರದಲ್ಲಿ ವಿದ್ಯಾಭ್ಯಾಸದ ಮುಖಾಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬರುವಂತಹ ಬಡಮಕ್ಕಳಿಗೆ ಭಯವನ್ನುಂಟು ಮಾಡುವ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಗೂಂಡಾಗಳಂತೆ ವರ್ತನೆ ಮಾಡಿ, ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನು ರಿತ್ಯಾ ಅವರ ಮೇಲೆ ಕ್ರಮ ತೆಗೆದುಕೊಂಡು ಗೂಂಡಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಬೇಕು. ಒಂದು ವೇಳೆ ದೂರು ದಾಖಲಿಸಿಕೊಂಡು ಬಂಧಿಸದಿದ್ದರೆ, ಜಿಲ್ಲಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ, ಉಪತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿ ಉಪತಹಶೀಲ್ದಾರ್ ವಾಸುದೇವಮೂರ್ತಿ ಮನವಿ ಪತ್ರವನ್ನು ಕೂಡಲೇ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ರವಾನಿಸಿ, ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿ.ವೈ.ಎಫ್.ಐ.ಸಂಘಟನೆಯ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ. ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿ, ಅನಿಲ್ಕುಮಾರ್, ನರೇಂದ್ರ, ಜಯರಾಂ, ರಮೇಶ್, ಅಜೇಯ್ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -