ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಆದರೆ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಕಾಲೇಜಿಗೆ ಕಾಂಪೌಡ್ ಇಲ್ಲದಿರುವುದರಿಂದ ಪ್ರತಿ ದಿನ ಸಂಜೆ ಆರು ಗಂಟೆಯ ನಂತರ ಕಿಡಿಗೇಡಿಗಳು ಬಂದು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ಕಾಲೇಜಿನ ಸಮಯದಲ್ಲಿ ಕೆಲ ಕಿಡಿಗೇಡಿಗಳು ಬೈಕುಗಳಲ್ಲಿ ಬಂದು ಜೋರಾಗಿ ಶಬ್ದ ಮಾಡುತ್ತಾ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾರೆ. ರಾತ್ರಿ ವೇಳೆ ಕಾಲೇಜಿನಲ್ಲಿ ಮದ್ಯಪಾನ, ಧೂಮಪಾನ, ಪಾನ್‌ಪರಾಗ್ ಮುಂತಾದವುಗಳನ್ನು ಬಳಸಿ ಗಲೀಜು ಮಾಡುತ್ತಾರೆ. ಬೆಳಿಗ್ಗೆ ಕಾಲೇಜಿಗೆ ಬಂದರೆ ಕೆಟ್ಟ ವಾಸನೆ ಗಲೀಜಿನ ದರ್ಶನವಾಗುತ್ತದೆ. ಇತ್ತೀಚೆಗಷ್ಟೇ ಕೆಲ ಕಿಡಿಗೇಡಿಗಳು ಮೆಟ್ಟಿಲಿನ ಗ್ರಿಲ್‌ಗಳನ್ನು ಕತ್ತರಿಸಿಹಾಕಿದ್ದರು. ಕಿಟಕಿ ಗಾಜುಗಳನ್ನು ಮುರಿದು, ಶೌಚಾಲಯದಲ್ಲಿ ಸಿಂಕುಗಳನ್ನು ಮುರಿದು, ಕಂಪ್ಯೂಟರ್ ಕೊಠಡಿ ಬಾಗಿಲನ್ನು ಸುಟ್ಟು ಹೋಗಿದ್ದಾರೆ. ಗೋಡೆ ಮೇಲೆ ಅಶ್ಲೀಲ ಬರಹಗಳನ್ನು ಬರೆದಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ವಿದ್ಯಾರ್ಥಿಗಳು ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಳೆದ ವರ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ರಾಜಣ್ಣ ಅವರಿಗೆ ಮನವಿ ಪತ್ರ ಕೊಟ್ಟು ಕಾಂಪೌಡ್ ನಿರ್ಮಿಸಬೇಕು, ವಾಚ್‌ಮನ್ ನೇಮಕ ಮಾಡಬೇಕೆಂದು ಕೋರಿದ್ದೆವು. ಆದರೆ ಒಂದು ವರ್ಷ ಕಳೆದರೂ, ಕಾಲೇಜಿನ ಆಸ್ತಪಾಸ್ತಿ ನಷ್ಟವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ರಾಜಣ್ಣ ಅವರಿಗೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ವಿವರಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ ನೀರಿನ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲಾಗುವುದು. ಸಂಪ್ ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು. ಕ್ರೀಡಾಂಗಣದ ಅಭಿವೃದ್ಧಿಗಾಗಿ ಮೀಸಲಿರುವ ಒಂದೂಕಾಲು ಕೋಟಿ ಹಣದಲ್ಲೇ ಕಾಂಪೌಂಡ್ ನಿರ್ಮಿಸಲಾಗುತ್ತದೆ. ಅದನ್ನು ಮೊದಲು ನಿರ್ಮಿಸಲು ಸೂಚಿಸುತ್ತೇನೆ. ಪೊಲೀಸರಿಗೆ ಬೆಳಿಗ್ಗೆ ಮತ್ತು ಸಂಜೆ ಬೀಟ್ ನಡೆಸಲು ತಿಳಿಸುವುದಾಗಿ ಹೇಳಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ ಮುಖಂಡರಾದ ಮುಜಾಯಿದ್ ಪಾಷ, ಗುರುಮೂರ್ತಿ, ಆರೀಫ್‌ಪಾಷ, ತನ್ವೀರ್‌ಪಾಷ, ವೆಂಕಟೇಶ, ಭವ್ಯ, ಮಂಜುಶ್ರೀ, ನಂದಿನಿ, ಮಮತಾ, ಲಲಿತಾ, ಪುರಸಭಾ ಸದಸ್ಯ ಅಫ್ಸರ್‌ಪಾಷ, ಜಮೀರ್ ಅಹ್ಮದ್, ರಹಮತ್ತುಲ್ಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ
- Advertisement -
- Advertisement -
- Advertisement -
- Advertisement -