ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಯ ಮೇಲ್ಛಾವಣಿಗಳು ಸೋರುತ್ತಿದ್ದು, ಮಕ್ಕಳು ಕುಳಿತು ಪಾಠವನ್ನು ಕೇಳಲು ತೊಂದರೆಯಾಗಿದೆ. ಶಾಲೆಯ ಮೇಲ್ಛಾವಣಿಗಳನ್ನು ದುರಸ್ಥಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೩ ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವ ಕಾರಣ, ಶಾಲೆಯ ಎರಡೂ ಕೊಠಡಿಗಳು ಸೋರುತ್ತಿದೆ. ಒಂದು ಕಟ್ಟಡದ ಮೇಲ್ಛಾವಣಿ ಕುಸಿಯುವಂತಿದೆ. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ.
ಕೊರೆಯುವ ಚಳಿಯಲ್ಲೆ ಶಾಲೆಯ ಪಡಸಾಲೆಯಲ್ಲಿ. ಮಕ್ಕಳನ್ನು ಕೂರಿಸಿಕೊಂಡು ಪಾಠವನ್ನು ಹೇಳಿಕೊಡಲಾಗುತ್ತಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ ಗ್ರಾಮಸ್ಥರಾದ ಶಿವಾನಂದ, ಮನೋಜ್, ಮುನಿರಾಜು, ಮಧು, ಶಿವಕುಮಾರ್, ಸಂತೋಷ್ಕುಮಾರ್, ತ್ಯಾಗರಾಜ್ ಮುಂತಾದವರು ಒತ್ತಾಯಿಸಿದ್ದಾರೆ.
‘ತಾಲ್ಲೂಕಿನಾಧ್ಯಂತ ಸೋರುತ್ತಿರುವ ಶಾಲೆಗಳ ಪಟ್ಟಿಯನ್ನು ಮಾಡಲಾಗುತ್ತಿದ್ದು, ಸಧ್ಯದಲ್ಲೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ, ದುರಸ್ಥಿಗೆ ಹಣ ಬಿಡುಗಡೆ ಮಾಡಿಕೊಡುವಂತೆ ಮನವಿ ಮಾಡಲಾಗುತ್ತದೆ. ತೊಂದರೆಯಿರುವ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ತಾತ್ಕಾಲಿಕ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
- Advertisement -
- Advertisement -
- Advertisement -
- Advertisement -