ಸೂರ್ಯ ಗ್ರಹಣ ವೀಕ್ಷಣೆಗಾಗಿ ಕನ್ನಡಕಗಳನ್ನು ತಯಾರಿಸಿದ ಪೆಂಡ್ಲಿವಾರಹಳ್ಳಿ ಸರ್ಕಾರಿ ಶಾಲಾ ಮಕ್ಕಳು

0
629

ಡಿಸೆಂಬರ್ 26 ರ ಅಪರೂಪದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಈಗಾಗಲೇ ಹಲವಾರು ಶಾಲೆಗಳಲ್ಲಿ ಹಲವು ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ನೇತೃತ್ವದಲ್ಲಿ ಮಕ್ಕಳೇ ಗ್ರಹಣ ವೀಕ್ಷಣೆಗಾಗಿ ಕನ್ನಡಕಗಳನ್ನು ತಯಾರಿಸಿದ್ದಾರೆ.
ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಬಾರದೆಂದು ಮಕ್ಕಳಿಗೆ ತಿಳಿ ಹೇಳಿದ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾ, ಅಲ್ಯೂಮಿನಿಯಂ ಫಾಯಿಲ್ ನಿಂದ ಶಾಲೆಯಲ್ಲೆ ಕನ್ನಡಕಗಳನ್ನು ತಯಾರಿಸಿದ್ದಾರೆ. ಶಾಲೆಯಲ್ಲಿ ಟಾರ್ಚ್, ಚೆಂಡು ಮತ್ತು ಗ್ಲೋಬ್ ಬಳಸಿ ಮಕ್ಕಳಿಗೆ ಗ್ರಹಣದ ಬಗ್ಗೆ ವಿವರಿಸಿದ್ದಾರೆ.
“ಅತಿ ಕಿರಿಯ ವಯಸ್ಸಿನ ಮಕ್ಕಳಿಗೆ ಸೌರವ್ಯೂಹ, 8 ಗ್ರಹಗಳು, ಗಾತ್ರದ ಬಗ್ಗೆ ವಿವರಿಸುವಾಗ ಭ್ರಮಣೆ ಪರಿಭ್ರಮಣೆಯಲ್ಲಿ ಉಂಟಾಗುವ ಗ್ರಹಣಗಳು ಹಗಲು ರಾತ್ರಿಗಳಷ್ಟೇ ಸಾಮಾನ್ಯ ಎಂದು ಅರಿವು ಮೂಡಿಸಲಾಯಿತು. ಮುಖ್ಯವಾಗಿ ಮಕ್ಕಳ ಪೋಷಕರಿಂದ ವರ್ಗಾಯಿಸಲಾದ ಗ್ರಹಣದ ಬಗೆಗಿನ ಮೂಢನಂಬಿಕೆ ತಪ್ಪು ಎಂದು ತಿಳುವಳಿಕೆ ನೀಡಲಾಯಿತು. ಕಳೆದ ಬಾರಿ ನಡೆದ ರಕ್ತಚಂದ್ರಗ್ರಹಣ ವೀಕ್ಷಿಸಿದ್ದ ಒಂದನೇ ತರಗತಿ ಮಕ್ಕಳು,ಈಗ ಮೊದಲ ಬಾರಿ ಸೂರ್ಯಗ್ರಹಣ ನೋಡಲು ಉತ್ಸುಕರಾಗಿದ್ದಾರೆ” ಎಂದು ಶಿಕ್ಷಕಿ ವಿ.ಉಷಾ ತಿಳಿಸಿದರು.
“ಡಿಸೆಂಬರ್ 26 ರಂದು ಬೇಗನೆ ಶಾಲೆಗೆ ಬಂದು ಮಕ್ಕಳಿಗೆ ಈ ಅಪೂರ್ವ ಸೂರ್ಯಗ್ರಹಣ ವೀಕ್ಷಿಸಲಿದ್ದೇವೆ. ಅಲ್ಲದೆ ಅಂದೇ ಹೊರಗೆ ಕುಳಿತು ಲಘು ಉಪಹಾರ(ರಸಾವಳಿ) ತಯಾರಿಸಿ ಸೇವಿಸುವುದೆಂದು ನಿರ್ಧಾರ ಮಾಡಿದ್ದೇವೆ. ಅದೇ ಸಮಯದಲ್ಲಿ ಮಕ್ಕಳಿಗೆ ಹೊರಗೆ ಹಾಲು ಕುಡಿಯಲು ನೀಡಲಾಗುವುದು” ಎಂದು ಅವರು ವಿವರಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!