ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿಯೂ ಸಮಾನತೆ ಕಲ್ಪಿಸಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ನಗರದ ಸ್ರೀ ಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ತ್ರೀಯನ್ನು ದೇವತೆಯ ಸ್ಥಾನದಲ್ಲಿ ಪೂಜಿಸುವಂತಹ ಭಾರತ ದೇಶದಲ್ಲಿ ಮಹಿಳೆಯು ಪುರುಷರಷ್ಟೆ ಸಮಾನವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾಳೆ, ಪುರುಷರಿಗಿಂತ ಯಾವುದೇ ರಂಗದಲ್ಲೂ ಕಡಿಮೆಯಿಲ್ಲದಂತೆ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಪ್ರತಿಭಟಿಸಬೇಕು. ಕಾನೂನಿನ ಅಡಿಯಲ್ಲಿ ನ್ಯಾಯವನ್ನು ಪಡೆಯಬೇಕು. ಶೇಕಡಾ ೫೦ ರಷ್ಟು ಮೀಸಲಾತಿಯನ್ನು ಈಗಾಗಲೇ ಮಹಿಳೆಯರಿಗೆ ಕಲ್ಪಿಸಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲದಿರುವುದರಿಂದ ಮಹಿಳೆಯರಿಗೆ ಈವರೆಗೂ ಕೌಟುಂಬಿಕ ಸ್ವಾತಂತ್ರ್ಯ ಲಭಿಸಿಲ್ಲ ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -