ಮಳೆ ನೀರು ಹರಿಯುವ ಕಾಲುವೆಯು ಮುಚ್ಚಿರುವುದರಿಂದ ಮಳೆ ಬಂದಾಗ ನೀರು ರಸ್ತೆ, ಹೊಲ ಹಾಗೂ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ನುಗ್ಗುವುದನ್ನು ತಡೆಯಲು ಸೋಮವಾರ ರೈತರು ಸ್ವಂತ ಖರ್ಚಿನಿಂದ ಜೆಸಿಬಿ ಬಳಸಿ ಕಾಲುವೆಯನ್ನು ಸರಿಪಡಿಸಿದ ಘಟನೆ ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ನಡೆದಿದೆ.
ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಬಳಿ ಅವೈಜ್ಞಾನಿಕವಾಗಿ ಪುರಸಭೆಯವರು ಸೇತುವೆ ನಿರ್ಮಿಸಿರುವುದು ಮತ್ತು ಅಕ್ಕಪಕ್ಕದ ಜಮೀನುಗಳವರು ಓಡಾಡಲೆಂದು ಕಾಲುವೆಯನ್ನು ಮುಚ್ಚಿರುವುದರಿಂದ ನೀರು ಸರಾಗವಾಗಿ ಕಾಲುವೆಯಲ್ಲಿ ಹರಿಯದಂತಾಗಿದೆ. ಮಳೆ ಬಂದಾಗ ಹಲವು ಬಾರಿ ಹೊಲ, ತೋಟಗಳಲ್ಲಿ ಲಕ್ಷಾಂತರ ರೂಗಳ ಬೆಳೆ ನಷ್ಟವಾಗಿದೆ. ಶಿಡ್ಲಘಟ್ಟದಿಂದ ಆನೂರು ಮಾರ್ಗವಾಗಿ ಸುಮಾರು 33 ಅಡಿ ಅಗಲದ ಈ ಕಾಲುವೆ ಹಲವೆಡೆ ಒತ್ತುವರಿಯಾಗಿರುವುದರಿಂದ ಕೆರೆಗೆ ಹರಿಯಬೇಕಾದ ನೀರು ಕೂಡ ವ್ಯರ್ಥವಾಗುತ್ತಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಬಳಿ ಪುರಸಭೆಯ ವತಿಯಿಂದ ಘನತ್ಯಾಜ್ಯ ನಿರ್ವಹಣೆಗೆಂದು ಘಟಕವೊಂದನ್ನು ನಿರ್ಮಿಸಲಾಗಿದೆ. ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹೋಗಲು ಮಳೆಯ ನೀರು ಹರಿಯುವ ಕಾಲುವೆಗೆ ಅಡ್ಡವಾಗಿ ರಸ್ತೆಯನ್ನು ನಿರ್ಮಿಸಿದ್ದಾರೆ. ತೀರ ಕೆಳಮಟ್ಟದಲ್ಲಿ ಅವೈಜ್ಞಾನಿಕವಾಗಿ ಇಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯ ಕೆಳಗೆ ನೀರು ಸರಾಗವಾಗಿ ಹರಿಯಲು ಆಗದಂತೆ ಕಸಕಡ್ಡಿ, ಮಣ್ಣು ತುಂಬಿಕೊಂಡಿದೆ. ಹೀಗಾಗಿ ಬಿದ್ದ ಮಳೆಯ ನೀರು ಕಾಲುವೆಯ ಮೂಲಕ ಹರಿಯಲಾಗದೇ ಹೊರಕ್ಕೆ ರಸ್ತೆ ಬದಿಗೆ ಹರಿಯುತ್ತದೆ. ಇದರಿಂದಾಗಿ ಕೆರೆಗೆ ಹೋಗಬೇಕಿದ್ದ ನೀರು ರಸ್ತೆ ಹಾಗೂ ತೋಟಗಳಿಗೆ ನುಗ್ಗಿ ನಷ್ಟವನ್ನು ಅನುಭವಿಸುವಂತಾಗಿದೆ.
ಶೀಘ್ರದಲ್ಲಿ ಪುರಸಭೆಯವರು ಅವೈಜ್ಞಾನಿಕವಾಗಿ ತಳಮಟ್ಟದಲ್ಲಿ ನಿರ್ಮಿಸಿರುವ ಸೇತುವೆಯನ್ನು ತೆಗೆದು ಎತ್ತರಮಟ್ಟದಲ್ಲಿ ನೀರು ಹರಿಯುವಂತೆ ನಿರ್ಮಿಸದಿದ್ದಲ್ಲಿ ನಾವೇ ತೆಗೆದು ನೀರು ಹರಿಯುವಂತೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
‘ಪ್ರತಿ ಬಾರಿ ಮಳೆ ಜೋರಾಗಿ ಬಿದ್ದಾಗ ಇದೇ ಸಮಸ್ಯೆ ಉಂಟಾಗುತ್ತೆ. ಪುರಸಭೆಯವರಿಗೆ ಹಲವು ಬಾರಿ ಈ ಬಗ್ಗೆ ಹೇಳಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ವರ್ಷವೂ ಇದೇ ಸಮಸ್ಯೆ ತಲೆದೋರಿದೆ. ಇಲ್ಲಿ ಸೇತುವೆ ನಿರ್ಮಿಸಿರುವುದೇ ಸರಿಯಾಗಿಲ್ಲ. ಇದರಲ್ಲಿ ಪುರಸಭೆಯವರ ಜವಾಬ್ದಾರಿಯೊಂದಿಗೆ ಕೆರೆ ಅಭಿವೃದ್ಧಿ ಸಂಘಗಳ ಜವಾಬ್ದಾರಿಯೂ ಇದೆ. ನೀರು ಪೋಲಾಗುವುದರ ಜೊತೆಗೆ ತೋಟಗಳಿಗೆ ನುಗ್ಗಿ ನಷ್ಟ ಅನುಭವಿಸುವವರ ಕಷ್ಟಕ್ಕೆ ಪರಿಹಾರ ನೀಡುವವರ್‍ಯಾರು. ಈಗಲೇ ನಮ್ಮಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಬರುವ ನೀರೂ ಪೋಲಾದರೆ ಹೇಗೆ. ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೇವಲ ಊರಿನ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಅವಕ್ಕೆ ಆಗಾಗ ಬೆಂಕಿ ಹಚ್ಚುತ್ತಾರೆ. ಅದರಿಂದ ಬರುವ ಹೊಗೆಯಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ತೋಟಗಳು ಹಾಳಾಗುವ ಜೊತೆಗೆ ರೇಷ್ಮೆ ಹುಳುಗಳೂ ಸಾವನ್ನಪ್ಪುತ್ತಿವೆ. ಮಳೆ ಬಂದಾಗ ಇದರಿಂದ ಕೊಳೆತ ತ್ಯಾಜ್ಯದಿಂದ ಕೆಟ್ಟ ವಾಸನೆ ಬರುತ್ತಿದ್ದು, ಗ್ರಾಮಗಳಿಗೆ ತ್ಯಾಜ್ಯದೊಂದಿಗೆ ಖಾಯಿಲೆಗಳನ್ನೂ ಪುರಸಭೆಯವರು ರವಾನಿಸುತ್ತಿದ್ದಾರೆ. ಆದ್ದರಿಂದ ನಾವೇ ರೈತರು ಒಗ್ಗೂಡಿ ಸ್ವಂತ ಖರ್ಚಿನಿಂದ ಜೆಸಿಬಿ ತರಿಸಿ ಕಾಲುವೆಯನ್ನು ಸರಿಪಡಿಸುತ್ತಿದ್ದೇವೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಹಿತ್ತಲಹಳ್ಳಿಯ ನಂಜುಂಡಪ್ಪ ದೂರುತ್ತಾರೆ.
ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಎಚ್.ಕೆ.ಸುರೇಶ್, ವೆಂಕಟರೋಣಪ್ಪ, ಅಶ್ವತ್ಥಪ್ಪ, ನರಸಪ್ಪ, ಎಸ್.ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -