ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ಕುಂಬಾರ ದೊಡ್ಡ ನಾರಾಯಣಪ್ಪ ಎಂಬ ದೇಶಭಕ್ತರು ವೀರಮರಣವನ್ನಪ್ಪಿದ್ದರು. ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹಾಗೂ ಹಲವಾರು ಹೋರಾಟಗಾರರನ್ನು ಹೊಂದಿದ್ದ ಗ್ರಾಮ ಭಕ್ತರಹಳ್ಳಿ ಅಂದು ದೇಶಭಕ್ತರಹಳ್ಳಿ ಎಂದೇ ಖ್ಯಾತಿಯಾಯಿತು.
ದೇಶಕ್ಕಾಗಿ ಪ್ರಾಣತೆತ್ತ ಕುಂಬಾರ ಮನೆತನದ ದೊಡ್ಡ ನಾರಾಯಣಪ್ಪ ಅವರ ಮೊಮ್ಮಕ್ಕಳು ತಮ್ಮ ಕುಟುಂಬದ ಹೆಸರಿನೊಂದಿಗೆ ಅಂಟಿಕೊಂಡ ಮಣ್ಣಿನ ಸೊಗಡನ್ನು ನಂಬಿಯೇ ಇಂದಿಗೂ ಜೀವನ ನಡೆಸುತ್ತಿದ್ದಾರೆ. ಮಣ್ಣಿನ ವಸ್ತುಗಳು ಜನರಿಂದ ದೂರವಾಗುತ್ತಿದ್ದರೂ ಕುಂಬಾರಿಕೆಯ ವೃತ್ತಿಯನ್ನೇ ಇಂದಿಗೂ ಅವರು ಅವಲಂಬಿಸಿದ್ದಾರೆ. ತಮ್ಮ ತಾತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೆ, ಇವರು ಪರಂಪರಾಗತ ವೃತ್ತಿಯನ್ನೇ ನೆಚ್ಚಿಕೊಂಡು ಬದಲಾದ ಕಾಲಘಟ್ಟದಲ್ಲಿ ಜೀವನ ನಡೆಸಲು ಹೋರಾಟ ನಡೆಸಿದ್ದಾರೆ.
ಪರಂಪರಾಗತ ಬಂದ ವೃತ್ತಿಗಳಲ್ಲಿ ಇಂದು ಬಹುತೇಕ ನೆಲಕಚ್ಚಿವೆ. ಅದರಲ್ಲೂ ಮಣ್ಣಿನ ಮಡಕೆಯನ್ನು ಬಳಸುವವರು ಕಡಿಮೆಯಾಗಿದ್ದಾರೆ. ಸ್ಟೀಲ್ ಮತ್ತು ಪ್ಲಾಸ್ಟಿಕ್ಗಳ ಪೈಪೋಟಿ ಬೇರೆ. ಮಡಕೆ ಕೊಳ್ಳುವವರಿಲ್ಲದೆ ಅದರ ತಯಾರಿಕೆಯನ್ನೇ ಅವಲಂಬಿಸಿದ ನೂರಾರು ಕುಟುಂಬಗಳು ಸೋತು ಸೊರಗಿವೆ.
ಹೀಗಿದ್ದರೂ ತಾಲ್ಲುಕಿನ ಭಕ್ತರಹಳ್ಳಿಯಲ್ಲಿ ಈಗಲೂ ತಿಗರಿ ತಿರುಗುವ ಗರಗರಾ ಸದ್ದು ಕೇಳುತ್ತಲೇ ಇದೆ. ಮನೆಯಂಗಳದಲ್ಲಿ ಜೇಡಿಮಣ್ಣಿನ ರಾಶಿ. ಒಣಗುತ್ತಿರುವ ಹಸಿಮಡಕೆ. ಸುಡುತ್ತಿರುವ ಒಣಗಿದ ಮಡಕೆ. ಭಕ್ತ ಕುಂಬಾರನಂತೆ ಮಣ್ಣಿನ ಆಕೃತಿಯ ಮಡಕೆಗಳನ್ನು ತಯಾರಿಸುತ್ತಾ, ಸಿದ್ಧಗೊಂಡ ನಾನಾ ಆಕಾರದ ಮಣ್ಣಿನ ಕಲಾಕೃತಿಗಳನ್ನು ಅವರ ಮನೆಯಂಗಳದಲ್ಲಿ ಕಂಡಾಗ ಈ ಕುಟುಂಬದ ಶ್ರಮಜೀವನ, ಕಾಲದೊಂದಿಗಿನ ಹೋರಾಟ ಸ್ಪಷ್ಟವಾಗುತ್ತದೆ.
ಕೇವಲ ಮಣ್ಣಿನ ಮಡಿಕೆಯನ್ನಷ್ಟೆ ತಯಾರಿಸಿದರೆ ಸಾಲದು, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಆಕರ್ಷಕವಾಗಿ ಬಣ್ಣಗಳನ್ನು ಬಳಿದಲ್ಲಿ ಹೆಚ್ಚು ಜನರನ್ನು ತಲುಪಬಹುದೆಂದು ಬುದ್ಧ, ಆನೆ, ಕುದುರೆ, ಲಾಫಿಂಗ್ ಬುದ್ಧ, ದೀಪಗಳು, ಹೂಕುಂಡಗಳು, ಕಲಾತ್ಮಕ ಹೂಜಿಗಳು, ಕರಂಡಕಗಳು, ಮಣ್ಣಿನ ಗಂಟೆಗಳು, ಗಿಳಿ, ತೋರಣಗಳು ಮುಂತಾದವುಗಳನ್ನೂ ತಯಾರಿಸುತ್ತಿದ್ದಾರೆ.
‘ಸುಮಾರು 30 ವರ್ಷಗಳಿಂದ ಈ ಕುಂಬಾರಿಕೆಯನ್ನು ಮಾಡುತ್ತಾ ಬಂದಿದ್ದೇನೆ. ಕುಲದ ಕಸುಬಾದ್ದರಿಂದ ಮುಂದುವರೆಸಿದ್ದೇನೆ. ಆದರೆ ಈಗ ಬದುಕು ಕಷ್ಟಕರವಾಗಿದೆ. ಮಣ್ಣನ್ನು ಕೊಂಡು ತಂದು ತಯಾರಿಸುವ ವಸ್ತುವಿಗೆ ಸೂಕ್ತ ಬೆಲೆಯಿಲ್ಲದೆ, ಮಾರಾಟವಾಗದೇ ವೃತ್ತಿಯು ಸಂಕಷ್ಟದಲ್ಲಿದೆ. ನಮ್ಮ ಮುಂದಿನ ತಲೆಮಾರು ಇದನ್ನು ಮುಂದುವರೆಸಲು ಅಸಾಧ್ಯವಾಗಿದೆ. ನಮಗೆ ಬೇರೆ ಕೆಲಸ ಗೊತ್ತಿಲ್ಲವಾದ್ದರಿಂದ ಇದನ್ನೇ ಅವಲಂಬಿಸಿದ್ದೇವೆ. ಸರ್ಕಾರದಿಂದ ನಮ್ಮ ವೃತ್ತಿಗೆ ಪುನಶ್ಚೇತನ ಸಿಕ್ಕಲ್ಲಿ ನಮಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಭಕ್ತರಹಳ್ಳಿ ಮುನಿರಾಜು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -