ಸ್ವ ಸಹಾಯ ಸಂಘಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಾಮಾಜಿಕ ಬದಲಾವಣೆಯೊಂದಿಗೆ ಮಹಿಳಾ ಸಬಲೀಕರಣಕ್ಕೆ ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈಚೆಗೆ ನಗರದ ಸಿದ್ದಾರ್ಥನಗರದ ಮೀರಾಬಾಯಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೨.೨೫ ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಅವರು ಮಾತನಾಡಿದರು.
ಪುರುಷರಿಗಿಂತಲೂ ಮಹಿಳೆಯರಿಗೆ ಹಣದ ಉಳಿತಾಯ ಹಾಗೂ ಆರ್ಥಿಕ ಶಿಸ್ತು ಹೆಚ್ಚು ಇರುತ್ತದೆ. ಹಾಗಾಗಿ ಬ್ಯಾಂಕ್ ಅಥವಾ ಇನ್ನಾವುದೆ ಮೂಲಗಳಿಂದ ಪಡೆದಂತಹ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರವೇ ಬಳಸುವುದರಲ್ಲಿ ಮಾತ್ರವಲ್ಲ ಸಾಲದ ಮರುಪಾವತಿಯಲ್ಲೂ ಮಹಿಳೆಯರು ಮುಂದಿದ್ದಾರೆ. ಹಾಗೆಯೆ ಮಹಿಳೆಯರ ಸಾಲದ ಮರುಪಾವತಿಯ ಪ್ರಮಾಣ ಶೇ೯೯ರಷ್ಟು ಇರುವುದು ಮಹಿಳೆ ಆರ್ಥಿಕ ಶಿಸ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಮಾತನಾಡಿ, ಮೀರಾಬಾಯಿ ಮಹಿಳಾ ಸಂಘಕ್ಕೆ ೨.೨೫ ಲಕ್ಷ ರೂಪಾಯಿಗಳ ಚೆಕ್ನ್ನು ನೀಡಲಾಗಿದೆ. ಸಂಘದಲ್ಲಿ ೧೫ ಮಂದಿ ಸದಸ್ಯರಿದ್ದು ಪ್ರತಿಯೊಬ್ಬರಿಗೂ ತಲಾ ೧೫ ಸಾವಿರ ರೂಪಾಯಿಗಳನ್ನು ನೀಡಲಾಗುವುದು.
ಮೈಕ್ರೋ ಕಿರುಸಾಲ ಯೋಜನೆಯಡಿ ಚೆಕ್ ನೀಡಿದ್ದು ಈ ಪೈಕಿ ತಲಾ ೧೦ ಸಾವಿರ ರೂ.ಗಳು ಪ್ರೋತ್ಸಾಹ ಧನ ಹಾಗೂ ತಲಾ ೫ ಸಾವಿರ ರೂ.ಗಳು ಸಾಲವಾಗಿದ್ದು ಆ ಹಣವನ್ನು ನಿಗದಿತ ಕಾಲಮಿತಿಯೊಳಗೆ ಮರುಪಾವತಿ ಮಾಡಬೇಕಾಗುತ್ತಿದೆ ಎಂದು ವಿವರಿಸಿದರು.
ಸಂಘದ ಪ್ರತಿನಿಧಿಗಳಾದ ಕೆ.ರಾಧ, ಮುನಿವೆಂಕಟಮ್ಮ, ಸಂಘದ ನಿರ್ವಹಣೆಗಾರರಾದ ಅಂಗನವಾಡಿ ಕಾರ್ಯಕರ್ತೆ ಸುನಂದಮ್ಮ, ಸೌಭಾಗ್ಯಮ್ಮ, ಜೆಡಿಎಸ್ ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ಮಳ್ಳೂರಯ್ಯ, ಅಪ್ಪೇಗೌಡನಹಳ್ಳಿ ಮಂಜುನಾಥ್, ತಾಟಪರ್ತಿ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -