ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಪಂಚಾಯತಿ ಅವಧಿಯ ಕೊನೆಯ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ತಾಲ್ಲೂಕು ಪಂಚಾಯತಿಗೆ ಬರುವಂತಹ ಎಲ್ಲಾ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಗ್ರಾಮ ಪಂಚಾಯತಿಗಳ ಅಧಿಕಾರಿಗಳೂ ಸೇರಿದಂತೆ ಎಲ್ಲಾ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತುಕೊಂಡು ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆಗಳನ್ನು ತಯಾರು ಮಾಡುವ ಮೂಲಕ ಅವಶ್ಯಕತೆ ಇರುವ ಕಡೆಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು, ಚರಂಡಿಗಳು, ಬೀದಿದೀಪಗಳ ನಿರ್ವಹಣೆಯೂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆಯನ್ನು ನೀಡಬೇಕು. ಕುಡಿಯುವ ನೀರಿನ ಸಂಪರ್ಕಕ್ಕಾಗಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಂಪರ್ಕ ಕಲ್ಪಿಸಲು ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲು ದುಬಾರಿಯಾದ ಕ್ರೀಯಾಯೋಜನೆ ತಯಾರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಕೆಲವು ಮಂದಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಮಿತ್ತನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಅನೈರ್ಮಲ್ಯದಿಂದಾಗಿ ಮಕ್ಕಳಿಗೆ ಕಾಯಿಲೆಗಳು ಬರುತ್ತಿದೆ. ಕೇಂದ್ರದ ಸುತ್ತಲೂ ಹಾಕಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗೆ ಸೂಚಿಸಿದ ಅವರು, ಗಂಗನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದ್ದು, ನೆಲಹಾಸು ಕಿತ್ತುಹೋಗಿದ್ದು, ಅದನ್ನು ದುರಸ್ಥಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಮೂಲಕ ನಡೆಯುತ್ತಿರುವ ಬಾಲಕರ ವಿದ್ಯಾರ್ಥಿನಿಲಯದಲ್ಲಿನ ಸ್ನಾನದ ಗೃಹಗಳನ್ನು ನಿರ್ಮಾಣ ಮಾಡಿ, ಮೂರು ವರ್ಷಗಳು ಕಳೆದರೂ ಇದುವರೆಗೂ ಬಾಗಿಲಿಟ್ಟಿಲ್ಲ, ಅದರ ಬಗ್ಗೆ ಗಮನಹರಿಸುವಂತೆ ಹಾಗೂ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಚಳಿಗಾಲದಲ್ಲಿ ನೀಲಿನಾಲಿಗೆ ರೋಗ ಕಾಣಿಸಿಕೊಂಡು ಅನೇಕ ಕುರಿಗಳು ಸಾವನ್ನಪ್ಪಿದ್ದು, ಇದುವರೆಗೂ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಸಹಾಯಧನ ಬರುತ್ತಿರಲಿಲ್ಲ, ಈಗ ಸರ್ಕಾರದಿಂದ ಸಹಾಯಧನ ನೀಡುವಂತಹ ಸೌಲಭ್ಯವಿದ್ದು, ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು, ಕುರಿಸಾಕಾಣಿಕೆ ಮಾಡುವಂತಹ ರೈತರು, ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಲಹೆಗಳನ್ನು ಪಡೆಯಬೇಕು ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಮುನಿನಾರಾಯಣರೆಡ್ಡಿ ಹೇಳಿದರು.
ಕಳೆದ ೫ ವರ್ಷಗಳ ಹಿಂದೆ ಚುನಾಯಿತರಾಗಿ ಆಯ್ಕೆಯಾಗಿ ಬಂದಿದ್ದ ಸದಸ್ಯರ ಅವಧಿ ಮುಕ್ತಾಯವಾಗುತ್ತಿದ್ದು, ಕೊನೆಯ ಸಭೆಯಾಗಿದ್ದರಿಂದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ಗೌಡ, ಸದಸ್ಯರಾದ ವೇಣುಗೋಪಾಲ್, ಯರಬಚ್ಚಪ್ಪ, ಸರಸ್ವತಮ್ಮ, ದ್ಯಾವಮ್ಮ, ಶಶಕಲಾ, ಶ್ರೀನಾಥ್, ಚನ್ನಕೃಷ್ಣಪ್ಪ, ನೇತ್ರಾವತಿ, ಗೌರಮ್ಮ, ಮಂಜುಳಮ್ಮ, ಅಧಿಕಾರಿಗಳಾದ ದೇವೆಗೌಡ, ನಾರಾಯಣಸ್ವಾಮಿ, ಪುರುಷೋತ್ತಮ್, ಮಧು, ಲಕ್ಷ್ಮೀದೇವಮ್ಮ, ಪ್ರಕಾಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -