ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ತರಕಾರಿ, ತೋಟಗಾರಿಕೆ ಬೆಳೆಗಳನ್ನು ಸಂಗ್ರಹ ಮಾಡಿ ಬೆಂಗಳೂರಿನ ಹಾಪ್ಕಾಮ್ಸ್ಗೆ ರವಾನಿಸಲು ಅನುಕೂಲ ಆಗುವಂತೆ ಜಿಲ್ಲಾ ಕೇಂದ್ರದ ಸಮೀಪ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ಹಾಪ್ಕಾಮ್ಸ್ನ ನಿರ್ದೆಶಕ ಮುತ್ತೂರು ಚಂದ್ರೇಗೌಡ ತಿಳಿಸಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಿಕ್ಕಬಳ್ಳಾಪುರದ ನಂದಿ ಬಳಿ ಇರುವ ತೋಟಗಾರಿಕೆ ಫಾರಂನ ಒಂದು ಎಕರೆ ಪ್ರದೇಶದಲ್ಲಿ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು ರೈತರು ಹಾಪ್ಕಾಮ್ಸ್ನ ಬೆಂಗಳೂರು ಮಳಿಗೆಗೆ ಅವುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಸಾಗಾಣಿಕೆ ವೆಚ್ಚ ಅಧಿಕವಾಗುತ್ತಿದೆಯಲ್ಲದೆ ಸಮಯವೂ ವ್ಯರ್ಥವಾಗುತ್ತಿದೆ. ಹಾಗಾಗಿ ನಂದಿ ಬಳಿ ಸಂಗ್ರಹಣಾ ಕೇಂದ್ರ ತೆರೆದು ಇಲ್ಲಿಯೆ ರೈತರ ಉತ್ಪನ್ನಗಳನ್ನು ಖರೀಸಲಾಗುವುದು ಎಂದು ವಿವರಿಸಿದರು.
ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದಲ್ಲಾಳಿಗಳನ್ನು ಅವಲಂಬಿಸುವುದು ತಪ್ಪಲಿದೆಯಲ್ಲದೆ ಇನ್ನಷ್ಟು ಹೆಚ್ಚು ಪ್ರದೇಶದಲ್ಲಿ ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈಗಾಗಲೆ ಹಾಪ್ಕಾಮ್ಸ್ನಿಂದ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದು ಇದರಿಂದ ರೈತರು ಬೆಂಗಳೂರಿನ ಹಾಪ್ಕಾಮ್ಸ್ ಕಚೇರಿಗೆ ತೆರಳಿ ಇಂಡೆಂಟ್ ಮಾಡುವ ತಾಪತ್ರಯ ತಪ್ಪಿದೆ. ಇನ್ನಷ್ಟು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹಾಪ್ಕಾಮ್ಸ್ನಿಂದ ಚನ್ನಪಟ್ಟಣದ ಬಳಿ ಎಳನೀರಿನ ಟೆಟ್ರಾಪ್ಯಾಕ್ ತಯಾರಿಕೆ ಘಟಕಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದೆ. ಒಂದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಮಿಷನರಿಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲೆ ಕಾರ್ಯಾರಂಭವಾಗಲಿದೆ. ಇದರಿಂದ ತೆಂಗಿನ ಕಾಯಿಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆಯಲ್ಲದೆ ಜನರ ಆರೋಗ್ಯ ಮಟ್ಟ ಸುಧಾರಣೆಗೂ ಅನುಕೂಲ ಕಲ್ಪಿಸಿದಂತಾಗುತ್ತದೆ. ಇದರ ಜತೆಗೆ ಬೆಂಗಳೂರು ಹೊರವಲಯದ ಕುಣಿಗಲ್ ರಸ್ತೆಯ ತಿಪ್ಪಸಂದ್ರದ ಬಳಿ ವಾಟರ್ ಪ್ಲಾಂಟ್ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಶೀರದಲ್ಲೆ ಘಟಕದ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹಾಪ್ಕಾಮ್ಸ್ನಿಂದ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ವಿವರಿಸಿದರು.
- Advertisement -
- Advertisement -
- Advertisement -
- Advertisement -