ರೈತರು ಭೂಮಿಯಲ್ಲಿ ಮಣ್ಣು ಪರೀಕ್ಷೆ ಮಾಡಿದ ನಂತರವೇ ಭೂಮಿಗೆ ಅಗತ್ಯವಾಗಿರುವಷ್ಟು ರಸಗೊಬ್ಬರಗಳನ್ನು ನೀಡುವುದು ಸೂಕ್ತವೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮುರಳೀಧರ್ ಹೇಳಿದರು.
ನಗರದ ಕೆಂಪೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಪ್ಪುನೇರಳೆಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಗೆ ಈಗಾಗಲೇ ಮಣ್ಣು ಪರೀಕ್ಷೆಯ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ. ರೈತರು, ಭೂಮಿಯ ಫಲವತ್ತತೆ ಕಾಪಾಡಲು ಹೆಚ್ಚಿನ ಆಸಕ್ತಿ ವಹಿಸಬೇಕು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಮುನೇಗೌಡ ಮಾತನಾಡಿ, ದೀರ್ಘಕಾಲದ ನೀರಾವರಿ ಇದ್ದರೆ, ರಸಗೊಬ್ಬರಗಳ ಬಳಕೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ರೈತರು ಭೂಮಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡಬೇಕು. ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಭೂಮಿಗೆ ನೀಡುವುದರಿಂದ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ಭೂಮಿ ಫಲವತ್ತತೆ ಕಡಿಮೆಯಾಗುತ್ತದೆ. ರೈತರು ಸಾವಯವ ಗೊಬ್ಬರ, ಹಾಗೂ ಕೊಟ್ಟಿಗೆ ಗೊಬ್ಬರಗಳನ್ನು ಭೂಮಿಗೆ ನೀಡಬೇಕು ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬೋಜಣ್ಣ ಮಾತನಾಡಿ, ರೈತರು ಹಿಪ್ಪುನೇರಳೆ ತೋಟಗಳಲ್ಲಿ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಲು ಆಧುನಿಕವಾದ ತಂತ್ರಜ್ಞಾನ ಉಪಯೋಗ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿಯಲ್ಲಿ ಸಹಾಯಧನ ಸಿಗುತ್ತದೆ. ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುವುದರಿಂದ ಅಂತರ ಬೆಳೆಗಳನ್ನು ಬೆಳೆಯಬಹುದು ಎಂದರು.
ನೂರಾರು ಮಂದಿ ರೈತರು ಹಿಪ್ಪುನೇರಳೆಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಮಾರ್ಟ್ ಕೇಮ್ ಟೆಕ್ನಾಲಜಿಸ್ ಸಂಸ್ಥೆಯ ಪ್ರಭಾಕರ್ ರೆಡ್ಡಿ, ಎನ್.ಎಂ. ಬಸವರಾಜು, ವೆಂಕಟಸ್ವಾಮರೆಡ್ಡಿ, ನವೀನ್ ಕುಮಾರ್, ನಾಗರಾಜು.ಎಂ.ಸಿ., ಯೋಗಾನಂದಗೌಡ, ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -