27.1 C
Sidlaghatta
Saturday, November 26, 2022

600 ಫ್ರೇಮ್ಗಳ ಅಂಚೆ ಅಂಕಣದಲ್ಲಿ ತಾಲ್ಲೂಕಿನ ಪ್ರತಿನಿಧಿಗಳು

- Advertisement -
- Advertisement -

ಅಂಚೆ ಚೀಟಿ ಸಂಗ್ರಹ ಪುರಾತನ ಹವ್ಯಾಸ. ಹವ್ಯಾಸಗಳಲ್ಲೆಲ್ಲಾ ಅಂಚೆ ಚೀಟಿ ಸಂಗ್ರಹವು ಮಹಾರಾಜನಂಥಹದ್ದೆಂದು ಪರಿಗಣಿಸಲ್ಪಟ್ಟಿದೆ. ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಬೆಳೆದಿರುವ ಅಂಚೆ ಚೀಟಿ ಸಂಗ್ರಹ ವಿಶ್ವದಲ್ಲೀಗ ಮುಂಚೂಣಿಯಲ್ಲಿರುವ ಹವ್ಯಾಸ. ಈ ಸಂಗ್ರಹದ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಪ್ರಾಂತೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಪ್ರಕಾಶ್ಚಂದ್ರ ಬೆಂಗಳೂರಿನಲ್ಲಿ ನಡೆಯುತ್ತಿರುವ "ಕರ್ನಾಪೆಕ್ಸ್ 2015' ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಪ್ರಕಾಶ್ಚಂದ್ರ ಬೆಂಗಳೂರಿನಲ್ಲಿ ನಡೆಯುತ್ತಿರುವ “ಕರ್ನಾಪೆಕ್ಸ್ 2015′ ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದಾರೆ.

ಅಂಚೆ ಇಲಾಖೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ “ಕರ್ನಾಪೆಕ್ಸ್ 2015′ ಹೆಸರಿನಲ್ಲಿ ಏಳು ವರ್ಷಗಳ ನಂತರ ನಾಲ್ಕು ದಿನಗಳ ಅಂಚೆ ಚೀಟಿ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಈ ಅಂಚೆ ಚೀಟಿಗಳ ಹಬ್ಬದಲ್ಲಿ ಹಲವು ಪ್ರತಿಷ್ಠಿತ ಸಂಗ್ರಹಕಾರಕಾರರು ತಮ್ಮ ವೈವಿಧ್ಯಮಯ ಅಂಚೆ ಚೀಟಿ ಸಂಗ್ರಹದೊಡನೆ ಪಾಲ್ಗೊಂಡಿದ್ದು, ತಾಲ್ಲೂಕಿನ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಆರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದಾರೆ.
ವಿವಿಧ ವಿಷಯಗಳನ್ನು ಆಧರಿಸಿ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗುತ್ತಿದೆ. ತಾಲ್ಲೂಕಿನ ಮೇಲೂರಿನ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಎಂ.ಆರ್.ಪ್ರಭಾಕರ್ ‘ಭಾರತ ಸಂಸ್ಕೃತಿ’ಯ ಬಗ್ಗೆ, ಚೌಡಸಂದ್ರ ಸರ್ಕಾರಿ ಶಾಲೆಯವರು ‘ಪರಿಸರ ಜಾಗೃತಿ’ ಕುರಿತಂತೆ, ಕನ್ನಮಂಗಲದ ಪ್ರಕಾಶ್ಚಂದ್ರ
‘ಸ್ವಾತಂತ್ರ್ಯ ಪೂರ್ವ ಅಂಚೆ ಚೀಟಿಗಳು’, ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ ‘ಭಾರತ ದರ್ಶನ‘, ಓಂ ದೇಶಮುದ್ರೆ ‘ಹಕ್ಕಿ’ಗಳ ಕುರಿತಂತೆ ಮತ್ತು ಮಲ್ಲಿಕಾರ್ಜುನ ‘ಭಾರತ ಭೂತಾನ್ ಸಹೋದರತ್ವ’ ಕುರಿತಂತೆ ಅಂಚೆ ಚೀಟಿಗಳನ್ನು ಪ್ರದರ್ಶಿಸಿದ್ದಾರೆ. ಒಟ್ಟಾರೆ 600 ಫ್ರೇಮ್ಗಳ ಪ್ರದರ್ಶನದಲ್ಲಿ ತಾಲ್ಲೂಕಿನ ಸ್ಪರ್ಧಿಗಳ 25 ಫ್ರೇಮ್ಗಳು ಪ್ರದರ್ಶಿತಗೊಂಡಿವೆ. ಒಂದು ಫ್ರೇಮ್ನಲ್ಲಿ ಹದಿನಾರು ಎ4 ಅಳತೆಯ ಹಾಳೆಗಳಿದ್ದು, ಅವುಗಳಲ್ಲಿ ಕಥನದ ರೀತಿಯಲ್ಲಿ ಆಯ್ದ ವಿಷಯದ ಕುರಿತಂತೆ ಅಂಚೆ ಚೀಟಿಗಳನ್ನು ವಿವರಣೆಯೊಂದಿಗೆ ಜೋಡಿಸಿಡಲಾಗಿರುತ್ತದೆ.
ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಸಂಗ್ರಹವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 1975ರ ನಂತರ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನಗಳನ್ನು ಏರ್ಪಡಿಸುವ ಪದ್ಧತಿ ಶುರು ಮಾಡಿತು. ಈಗೆಲ್ಲಾ ಇ–ಮೇಲ್, ಎಸ್.ಎಂ.ಎಸ್. ಕಾಲ. ಅಂಚೆ ಡಬ್ಬಗಳಿಗೆ ಕಾಗದ ಪತ್ರಗಳನ್ನು ಹಾಕುವುದು ಹಿಂದಿನಷ್ಟಿಲ್ಲ. ಕೊರಿಯರ್ಗಳು ಬೇರೆ ಬಂದಿವೆ. ಅಂಚೆ ಪತ್ರಗಳ ರವಾನೆ ಕೊಂಚ ಇಳಿಮುಖವಾದರೂ ಅಂಚೆ ಚೀಟಿಗಳ ಮುದ್ರಣ ಸಾಂಗವಾಗಿ ನಡೆದಿದೆ. ಅಂಚೆ ಚೀಟಿಗಳ ಸಂಗ್ರಹಕಾರರ ಸಂಖ್ಯೆಯೂ ವೃದ್ಧಿಸಿದೆ.
‘ಅಬಾಲವೃದ್ಧರಾಗಿ ಎಲ್ಲರೂ ತೊಡಗಿಕೊಳ್ಳಬಹುದಾದ ಹವ್ಯಾಸವಾಗಿರುವ ಅಂಚೆ ಚೀಟಿ ಸಂಗ್ರಹಕ್ಕೆ ಬೆಂಗಳೂರಿನಲ್ಲಿ ಜರುಗುತ್ತಿರುವ ಪ್ರದರ್ಶನ ಪೂರಕವಾಗಲಿದೆ. ಕರ್ನಾಟಕ ಅಂಚೆ ವೃತ್ತ ಆಯೋಜಿಸಿರುವ ಈ ಪ್ರಾದೇಶಿಕ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಕೇವಲ ಕರ್ನಾಟಕದ ಸಂಗ್ರಹಕಾರರು ಮಾತ್ರ ಬರುತ್ತಿಲ್ಲ. ದೇಶವಿದೇಶಗಳ ಖ್ಯಾತನಾಮ ಅಂಚೆ ಚೀಟಿ ಸಂಗ್ರಹಕಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ನಮ್ಮ ತಾಲ್ಲೂಕಿನಿಂದಲೂ ನಾವು ಆರು ಮಂದಿ ಸ್ಪರ್ಧಿಸಿ ಪ್ರದರ್ಶಿಸುತ್ತಿರುವುದು ಹೆಮ್ಮೆ ತಂದಿದೆ. ವಿವಿಧ ವಿನ್ಯಾಸಗಳ, ಬಗೆಬಗೆಯ ಬಣ್ಣಗಳು, ನಾನಾ ಆಕೃತಿಗಳ ರಂಗುರಂಗಿನ ಅಂಚೆ ಚೀಟಿಗಳು ಆಯಾ ದೇಶದ ಆಯಾ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೊತ್ತು ತರುವ ವಾಹಕಗಳು’ ಎಂದು ಕನ್ನಮಂಗಲದ ಪ್ರಕಾಶ್ಚಂದ್ರ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!