Sidlaghatta : ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪದವಿ ಪಠ್ಯಕ್ರಮ ಓದುವ ಜತೆಗೆ ಯುಪಿಎಸ್ಸಿ, ಕೆಪಿಎಸ್ಸಿಯಿಂದ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸಿದಾಗ ಮಾತ್ರ ಉನ್ನತ ಹುದ್ದೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಐ.ಆರ್.ಎಸ್ ಅಧಿಕಾರಿ ಪಿ.ಆರ್.ಬೈರಪ್ಪ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕು ಆಡಳಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾಗರಿಕ ಸೇವಾ ಹುದ್ದೆಗಳಂಥ ಉನ್ನತ ಹುದ್ದೆ ಸೇರಿದಂತೆ ಯಾವುದೇ ಸರ್ಕಾರಿ ಉದ್ಯೋಗ ಪಡೆಯಬೇಕೆಂದರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು. ಹೀಗಾಗಿ ಪದವಿ ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಓದಿನ ಜತೆಯಲ್ಲಿ ಸ್ಪರ್ಧಾತ್ಮಕ ಪಠ್ಯಕ್ರಮವನ್ನು ಓದಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಉನ್ನತವಾದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಛಲ ಬೆಳೆಸಿಕೊಳ್ಳಬೇಕು. ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಹಲವು ಅಡೆತಡೆಗಳು ಬರುತ್ತವೆ. ವಿಫಲವಾದರು ಸಹ ಆತ್ಮವಿಶ್ವಾಸ ಕಳೆದುಕೊಳ್ಳದೆ ಪ್ರಯತ್ನ ಮಾಡಬೇಕು ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಕಷ್ಟಪಟ್ಟು ಓದಿದರೆ ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆದುಕೊಳ್ಳಬಹುದು. ವಿದ್ಯಾರ್ಥಿ ಜೀವನ ಆರಾಮವಾಗಿ ಕಳೆದರೆ ಭವಿಷ್ಯದಲ್ಲಿ ಕಷ್ಟದ ಬದುಕು ನಡೆಸಬೇಕಾಗುತ್ತದೆ. ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಗುರಿ ಮಾತ್ರ ಹಲವು ವಿದ್ಯಾರ್ಥಿಗಳು ಇಟ್ಟುಕೊಳ್ಳುತ್ತಾರೆ. ಈ ಎರಡು ಬಿಟ್ಟು ಇತರೆ ಕ್ಷೇತ್ರಗಳಲ್ಲಿ ಹಲವು ಅವಕಾಶಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸತತ ಅಧ್ಯಯನದೊಂದಿಗೆ ಆತ್ಮವಿಶ್ವಾಸ ಮುಖ್ಯ ಎಂದರು.
ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವುದನ್ನು ಸದುಪಯೋಗ ಪಡೆದುಕೊಳ್ಳಬೇಕು. ಇದರೊಂದಿಗೆ ವಿದ್ಯಾರ್ಥಿಗಳಿಗೆ “ಸ್ಪರ್ಧಾ ಅರಿವು” ಎಂಬ ಮಾಸಿಕವನ್ನು ಸಹ ಉಚಿತವಾಗಿ ನೀಡುತ್ತಿದ್ದು, ಓದಿ ಪರೀಕ್ಷೆಗಳಿಗೆ ಸಿದ್ಧರಾಗಿ. ಇದರೊಂದಿಗೆ ಪ್ರತಿ ದಿನ ಕನಿಷ್ಠ ಎರಡು ಪತ್ರಿಕೆಗಳನ್ನಾದರೂ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರಸಾಯನಶಾಸ್ತ್ರ ಪ್ರಾಧ್ಯಾಪಕ ಡಾ. ಸತೀಶ್ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಪ್ರಾಂಶುಪಾಲ ಡಾ.ವಿ.ವೆಂಕಟೇಶ್, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಮುರಳಿ ಆನಂದ್, ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಎ.ಆದಿನಾರಾಯಣಪ್ಪ, ಪಿಡಿಒ ವಜ್ರೇಶ್, ಡಿ.ಎಸ್.ಎಸ್.ಅಧ್ಯಕ್ಷ, ಟಿ.ಎ.ಚಲಪತಿ, ಪ್ರೊ.ಗಿರಿಜಾ ಹಾಜರಿದ್ದರು.