Vantur, Sidlaghatta : ಅಂಗನವಾಡಿ ಕೇಂದ್ರಗಳು ಮಕ್ಕಳ ಪೌಷ್ಟಿಕತೆ ಜೊತೆಗೆ ಶಾಲಾಪೂರ್ವ ಶಿಕ್ಷಣ ನೀಡುವ ಕೆಲಸವನ್ನು ಮಾಡುವ ಗುರುತರ ಜವಾಬ್ದಾರಿ ಹೊಂದಿವೆ ಎಂದು ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀದೇವಮ್ಮ ತಿಳಿಸಿದರು.
ತಾಲ್ಲೂಕಿನ ವಂಟೂರು ಅಂಗನವಾಡಿ ಕೇಂದ್ರದಲ್ಲಿ ಬುಧವಾರ ವಂಟೂರು ಗ್ರಾಮದ ದಿವಂಗತ ಅಜಯ್ ಕುಮಾರ್ ಅವರ ಗೆಳೆಯರ ಬಳಗದವರು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವುದರಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾಭಿವೃದ್ದಿಗೆ ಸಹಾಯವಾಗಲು ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಮುದಾಯವು ಅಂಗನವಾಡಿ ಕೇಂದ್ರಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅಂಗನವಾಡಿ ಕೇಂದ್ರಗಳ ಸಬಲೀಕರಣ ಸಾಧ್ಯ. ಅಂತಹ ಅಭಿವೃದ್ಧಿಗೆ ರಾಮೇಶ್ವರ ಮಜರಾ ವಂಟೂರು ಅಂಗನವಾಡಿ ಕೇಂದ್ರ ಒಂದು ಮಾದರಿಯಾಗಿದೆ ಎಂದರು.
ಯುವಜನರ ಸಂಘದ ಪರವಾಗಿ ಮಾತನಾಡಿದ ಶಿವಕುಮಾರ್, ನಮ್ಮ ಕೊಡುಗೆಯಿಂದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಫಲವಾದರೆ, ನಮ್ಮ ಪ್ರಯತ್ನ ಯಶಸ್ವಿಯಾದಂತೆ. ಈ ನಿಟ್ಟಿನಲ್ಲಿ ನಮ್ಮ ಸಹಕಾರ ಮುಂದುವರೆಯುತ್ತದೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಡ್ಲಘಟ್ಟ ಸಂಸ್ಥೆಯ ಜಯರಾಂ ಸತೀಶ್, ಮೇಲ್ವಿಚಾರಕಿ ಶಶಿಕಲಾ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀದೇವಮ್ಮ, ಜಯಲಕ್ಷ್ಮಿ, ಗಾಯಿತ್ರಿ, ಮಂಜುಳಮ್ಮ ಮತ್ತು ಗ್ರಾಮದ ಯುವಕರಾದ ಅನಿಲ್, ಅಭಿಲಾಷ್, ರಮೇಶ್ ಸಂಗಡಿಗರು ಹಾಗೂ ಬಾಲವಿಕಾಸ ಸಮಿತಿ ಸದಸ್ಯರುಗಳು, ಹಿರಿಯರಾದ ವೆಂಕಟೇಶಪ್ಪ, ಮಂಜುನಾಥ್, ಜಯಚಂದ್ರಪ್ಪ, ಆನಂದ, ಮಧು, ಗಂಗಾಧರ, ಪವಿತ್ರ, ಪ್ರೇಮಮ್ಮ, ಪವಿತ್ರ ಹಾಜರಿದ್ದರು.