Sidlaghatta : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಅಕ್ಷತೆ ಪ್ರತಿ ಮನೆಗೆ ತಲುಪಿಸುವ ಅಭಿಯಾನವನ್ನು ಕೈಗೊಂಡಿದ್ದೇವೆ ಎಂದು ಬಿಜೆಪಿ ಮುಖಂಡ ರಾಮಚಂದ್ರಗೌಡ ತಿಳಿಸಿದರು.
ನಗರದ ಕೋಟೆ ವೃತ್ತದ ಬಳಿಯ ಶ್ರೀರಾಮರ ದೇವಾಲಯದಲ್ಲಿ ಸೋಮವಾರ ರಾಮಮಂದಿರ ಉದ್ಘಾಟನೆಯ ಅಕ್ಷತೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಂದಿರ ಭಾರತದ ದೈವ ಮಂದಿರವಾಗಲಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಹಿಂದೂಗಳ ಐನೂರು ವರ್ಷದ ಕನಸು ಈಗ ನನಸಾಗುತ್ತಿದೆ. ಜ.22 ರಂದು ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ನೇರವೇರುತ್ತಿರುವುದು ಪ್ರತಿಯೊಬ್ಬರಿಗೂ ಅಭಿಮಾನದ ಸಂಕೇತವಾಗಿದೆ.
ಮಂದಿರ ನಿರ್ಮಾಣ ಕಾರ್ಯದ ಸಂದೇಶ ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ಮತ್ತು ಅಯೋಧ್ಯೆಯಿಂದ ಬಂದಿರುವ ಶ್ರದ್ಧೆಯ ಅಕ್ಷತೆಯನ್ನು ತಾಲ್ಲೂಕಿನ ಪ್ರತಿ ಕುಟುಂಬಕ್ಕೂ ತಲುಪಿಸಲು ಹಮ್ಮಿಕೊಂಡಿರುವ ಅಕ್ಷತಾ ವಿತರಣೆ ಅಭಿಯಾನ ಯಶಸ್ವಿಯಾಗಬೇಕು ಎಂದರು.
ಭಜರಂಗದಳ ವಿಭಾಗ ಸಂಚಾಲಕ ನರೇಶ್ ಮಾತನಾಡಿ, ಜ.22 ರಂದು ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ, ಪ್ರಮುಖ ದೇವಸ್ಥಾನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ವೀಡಿಯೋ ಪ್ರದರ್ಶನ ಮಾಡಲಾಗುವುದು. ಎಲ್ಲರೂ ಒಗ್ಗೂಡಿ ಈ ವಿಶಿಷ್ಟ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಕರಸೇವಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಮುಖಂಡರಾದ ಆನಂದ ಗೌಡ, ಡಾ.ಡಿ.ಟಿ.ಸತ್ಯನಾರಾಯಣರಾವ್, ದೇವರಾಜ್ ಹಾಜರಿದ್ದರು.