ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದ ಶಿಡ್ಲಘಟ್ಟ ನಗರದ ಮಾರುತಿ ನಗರದ ದೇವೀರಮ್ಮ(45) ಅವರ ಕುಟುಂಬಕ್ಕೆ BESCOM ನಿಂದ 5 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ಮೃತರ ಕುಟುಂಬದ ವಾರಸುದಾರರಿಗೆ ವಿತರಿಸಲಾಯಿತು.
ಕಳೆದ ವರ್ಷ ಸೆಪ್ಟೆಂಬರ್ 21 ರಂದು ಬೆಳಗ್ಗೆ 8.30ರ ಸಮಯದಲ್ಲಿ ಮೇವು ತರಲೆಂದು ದೇವೀರಮ್ಮ ಅವರು ಹೊಲಕ್ಕೆ ಹೋಗುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದರು. (ಮಾಹಿತಿ – https://www.sidlaghatta.com/news/electricity-accident/)
ಈ ವೇಳೆ ಸ್ಥಳೀಯರು, ಮೃತರ ಕುಟುಂಬದವರು ಹಾಗೂ ರೈತ ಸಂಘದವರು ಪ್ರತಿಭಟನೆ ನಡೆಸಿ BESCOM ನ ಸಿಬ್ಬಂದಿ ನಿರ್ಲಕ್ಷ್ಯದಿಂದಲೆ ಸಾವು ಸಂಭವಿಸಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಶವ ಪರೀಕ್ಷೆ ನಡೆಸಿದ್ದ ವೈದ್ಯರು ಸಹ ವಿದ್ಯುತ್ ಅಪಘಾತದಿಂದಲೆ ಸಾವು ಸಂಭವಿಸಿದೆ ಎಂದು ವರದಿ ನೀಡಿದ್ದರಲ್ಲದೆ, ವಿದ್ಯುತ್ ಅಪಘಾತ ನಡೆಯುವುದಕ್ಕೂ ಹಿಂದಿನ ದಿನ ಸಂಜೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ವಿಚಾರವನ್ನು ಸ್ಥಳೀಯರು ಕರೆ ಮಾಡಿ ಬೆಸ್ಕಾಂ ಸಿಬ್ಬಂದಿಗೆ ತಿಳಿಸಿದ್ದರೂ ಸಿಬ್ಬಂದಿ ಯಾರೂ ಅತ್ತ ತಲೆ ಹಾಕಿರಲಿಲ್ಲ.
ಬೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯವೂ ವಿದ್ಯುತ್ ಅಪಘಾತಕ್ಕೆ ಕಾರಣ ಎಂಬುದು ತನಿಖೆ ವೇಳೆ ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಬೆಸ್ಕಾಂನಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು.