Cheemanahalli, Sidlaghatta : ಗ್ರಾಮೀಣ ಮಕ್ಕಳಲ್ಲಿ ಶಿಕ್ಷಣ ಮತ್ತು ಸಂಸ್ಕಾರವನ್ನು ಮೂಡಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಲು ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕರಿಂದ ಶಿಡ್ಲಘಟ್ಟ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಒಟ್ಟು 230 ಮಕ್ಕಳಿಗೆ ಸಂಜೆ ವೇಳೆ ತರಬೇತಿ ಕೊಡಿಸಲಾಗುತ್ತಿದೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವ್ ತಿಳಿಸಿದರು.
ತಾಲ್ಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಸೋಮವಾರ ಶಾರದೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಕರಿಂದ ಶಿಕ್ಷಣ ಮತ್ತು ಸಂಸ್ಕಾರವನ್ನು ಪ್ರತಿದಿನ ಸಂಜೆ ಐದರಿಂದ ಏಳೂವರೆ ಗಂಟೆಯವರೆಗೂ ಕಲಿಸಲಾಗುತ್ತಿತ್ತು. ಇನ್ನೇನು ಪರೀಕ್ಷೆ ಪ್ರಾರಂಭವಾಗುತ್ತದೆ, ಮಕ್ಕಳು ಕಲಿತಿರುವುದನ್ನು ಮನನ ಮಾಡಿಕೊಂಡು, ಧೈರ್ಯವಾಗಿ ಬರೆಯಿರಿ. ನಿಮ್ಮ ಪರಿಶ್ರಮ ನಿಮ್ಮನ್ನು ಉನ್ನತಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜಿಎಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ.ಜ್ಯೋತಿ, ತಾವು ಬೆಳೆದು ಬಂದ ಹಾದಿ, ವೈದ್ಯೆಯಾಗಲು ಓದಿದ ರೀತಿ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ನೆನೆದು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಗ್ರಾಮದ ಮುಖಂಡರಾದ ಚೀಮನಹಳ್ಳಿ ಗೋಪಾಲ್, ನಾರಾಯಣಸ್ವಾಮಿ, ಪ್ರತಾಪ್, ಮುನಿರಾಜು, ಬಸವರಾಜು, ಬಿ.ಜಿ.ಎಸ್ ಸಂಸ್ಥೆಯ ಶಿಕ್ಷಕರಾದ ಅವಿನಾಶ್, ಚಂದ್ರಶೇಖರ್, ರವಿಕುಮಾರ್ ಹಾಜರಿದ್ದರು.