Cheemangala, Sidlaghatta : ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಮೂಲಭೂತ ಸೌಕರ್ಯಗಳು ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಸುಸಜ್ಜಿತ ಹಳ್ಳಿಸಂತೆ ಮಾರುಕಟ್ಟೆಯು ಈ ಭಾಗದ ಜನರಿಗೆ ವರದಾನವಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಡಿ.ಎಲ್) ಯೋಜನೆಯಡಿ 48 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಳ್ಳಿಸಂತೆ ಮಾರುಕಟ್ಟೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
“ಹಳ್ಳಿ ಸಂತೆ”ಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ವ್ಯಾಪಾರಸ್ಥರೂ ತಮ್ಮ ಮಳಿಗೆಗಳನ್ನು ಇಟ್ಟುಕೊಳ್ಳಬಹುದಾಗಿದೆ. ಸುತ್ತಮುತ್ತಲಿನ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ. ಮಳೆ, ಬಿಸಿಲು, ಗಾಳಿಯ ತೊಂದರೆಯಿರುವುದಿಲ್ಲ. ಕೊಳ್ಳುವವರಿಗೂ ಅನುಕೂಲಕರ. ಇಲ್ಲಿ ಶೌಚಾಲಯ, ಕ್ಯಾಂಟೀನ್ ಮತ್ತು ಕುಡಿಯುವ ನೀರಿನ ಸೌಕರ್ಯ ಕೂಡ ಮಾಡಲಾಗಿದೆ. ಸಂತೆಯ ತ್ಯಾಜ್ಯವನ್ನು ಸಂಗ್ರಹಿಸಲೆಂದೇ ಇಲ್ಲಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಗೊಬ್ಬರ ಕೂಡ ತಯಾರಿಸಬಹುದಾಗಿದೆ. ಒಟ್ಟಾರೆ ಆರ್ಥಿಕ ಪ್ರಗತಿಗೆ ಇದು ಸಹಾಯಕವಾಗಲಿದೆ ಎಂದು ಹೇಳಿದರು.
ಸರ್ಕಾರಿ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಅವುಗಳನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಕೂಡ ನಮ್ಮ ಮೇಲೆ ಇದೆ. ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಯೋಜನೆಗಳ ಕಾಮಗಾರಿಗಳ ಗುಣಮಟ್ಟಕ್ಕೆ ಆಧ್ಯತೆ ನೀಡಲಾಗುತ್ತಿದೆ. ಜನರ ತೆರಿಗೆ ಹಣದಿಂದ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಅದು ಪೋಲಾಗಬಾರದು ಎಂಬ ಕಾಳಜಿ ನಮ್ಮದು. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಕೆಲಸಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಎಲ್ಲರೂ ಕೈಜೋಡಿಸಿ ಎಂದರು.
ಕೆ.ಎಂ.ಎಫ್. ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ, ಸ್ವಚ್ಛತೆಗೆಯೆಂಬುದು ಮನೆಗಳಿಂದಲೇ ಪ್ರಾರಂಭವಾಗಬೇಕು. ಪ್ರತಿಯೊಬ್ಬರೂ ಮನಸ್ಸು ಮಾಡಿದಲ್ಲಿ ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯ. ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣತೊಡಬೇಕು. ಸಾಧ್ಯವಾದಷ್ಟೂ ಪ್ಲಾಸ್ಟಿಕ್ ಬಳಸದಿರಲು ಎಲ್ಲರೂ ದೃಢ ಮನಸ್ಸು ಮಾಡಿ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ಮಾತನಾಡಿ, ತರಕಾರಿ ಮುಂತಾದ ತಿನ್ನುವ ಆಹಾರ ಪದಾರ್ಥಗಳನ್ನು ಸ್ವಚ್ಛ ಪರಿಸರದಲ್ಲಿ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಿರುವ ಹಳ್ಳಿಸಂತೆ ಮಾರುಕಟ್ಟೆಯು ಹಲವು ಆಯಾಮಗಳನ್ನು ಹೊಂದಿದ್ದು, ಇದರ ಯಶಸ್ಸಿನಲ್ಲಿ ಗ್ರಾಮಗಳ ಯಶಸ್ಸು ಅಡಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷೆ ಸುಮಿತ್ರಾ ಮಂಜುನಾಥ್, ಸದಸ್ಯರಾದ ರಾಜಪ್ಪ, ಭ್ರಮರಾಂಭ ಜಯಶಂಕರ್, ಎನ್.ಶ್ರೀನಿವಾಸ್, ಸರಸ್ವತಿ ಡಿ.ಎಂ.ರಮೇಶ್, ಶಾರದ ಟಿ.ಲಕ್ಷ್ಮಿನಾರಾಯಣಪ್ಪ, ಎ.ಅಂಬರೀಶ್, ನಾರಾಯಣಸ್ವಾಮಿ, ಪಿಡಿಒ ತನ್ವೀರ್ ಅಹಮದ್, ಮುಖಂಡರಾದ ತಾದೂರು ರಘು, ಅರಿಕೆರೆ ಮುನಿರಾಜು, ಸಿ.ಎಂ.ಮುನಿರಾಜು ಹಾಜರಿದ್ದರು.