Sidlaghatta : ಜಗತ್ತಿನಲ್ಲೇ ಶ್ರೇಷ್ಠವಾದ ನಮ್ಮ ಭಾರತದ ಸಂವಿಧಾನದ ಬಗ್ಗೆ ಜನ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಾಗಿತು, ಅದು ಎಲ್ಲರಿಂದಲೂ ಸಾಧ್ಯವಾಯಿತು ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಗ್ರಾಮ ಪಂಚಾಯಿತಿವರಿಗೆ ಅಭಿನಂದನಾ ಪತ್ರವನ್ನು ವಿತರಿಸಿ ಕೃತಜ್ಞತೆಗಳನ್ನು ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಏಳು ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಸಾಗಿದ್ದು ಎಲ್ಲ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲೂ ಅಧಿಕಾರಿ, ಸಿಬ್ಬಂದಿ, ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಲ್ಲ ದಲಿತ, ರೈತ, ಕನ್ನಡ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಟ್ಟರು.
ರಾತ್ರಿ ಹಗಲೆನ್ನದೆ ಸಾಗಿದ ಯಾತ್ರೆಯನ್ನು ಅದ್ದೂರಿ ಅರ್ಥಪೂರ್ಣವಾಗಿ ಬರ ಮಾಡಿಕೊಂಡು ಸಂವಿಧಾನದಲ್ಲಿ ಸಾಮಾನ್ಯ ಜನರಿಗಿರುವ ಹಕ್ಕು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವಂತ ಅರ್ಥ ಪೂರ್ಣ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕೀರ್ತಿ ಎಲ್ಲರಿಗೂ ಸೇರುತ್ತದೆ ಎಂದರು.
ಯಾತ್ರೆಯು ಆಗಮಿಸಿದಾಗ ಹಾಜರಿದ್ದ ಶಾಲಾ ಮಕ್ಕಳು, ಶಿಕ್ಷಕರು, ಸ್ವ ಸಹಾಯ ಸಂಘಗಳ ಸದಸ್ಯರು, ಎಲ್ಲ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಗ್ರಾಮಸ್ಥರು ಸೇರಿದಂತೆ ಪ್ರತ್ಯಕ್ಷ ಪರೋಕ್ಷವಾಗಿ ಎಲ್ಲರ ಸಹಕಾರದಿಂದ ಯಾತ್ರೆಯು ಯಶಸ್ವಿಯಾಗಿದ್ದು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಅಭಿನಂದನಾ ಪತ್ರವನ್ನು ವಿತರಿಸಿದರು. ಇಒ ಮುನಿರಾಜ, ಸಮಾಜ ಕಲ್ಯಾಣಾಕಾರಿ ಜಗದೀಶ್ ಹಾಜರಿದ್ದರು.