ಮಳೆ ಹಾನಿಗೆ ಹಾಳಾಗಿರುವ ಬೆಳೆಗಳಾದ ರಾಗಿ, ಜೋಳ, ತೊಗರಿ ಮತ್ತಿತರ ಬೆಳೆಗಳಿಗೆ ಕನಿಷ್ಠ 25 ಸಾವಿರ ಹಾಗೂ ತರಕಾರಿ, ಹಣ್ಣು, ಹೂವು ಬೆಳೆಗಾರರಿಗೆ 50 ಸಾವಿರ ಪರಿಹಾರ ಧನವನ್ನು ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ತಾಲ್ಲೂಕಿನಾದ್ಯಂತ ಈ ವರ್ಷ ಹೆಚ್ಚಿನ ಮಳೆಯಾಗಿದ್ದು ಕೆಲವು ಕೆರೆಗಳು ತುಂಬಿ ನೆರೆಯ ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿವೆ. ಪೋಲಾಗುತ್ತಿರುವ ಕೆರೆಗಳ ನೀರನ್ನು ತಾಲ್ಲೂಕಿನ ಬೇರೆ ಕೆರೆಗಳಿಗೆ ಹರಿಸಿದ್ದೇ ಆದಲ್ಲಿ ಮತ್ತಷ್ಟು ಕೆರೆಗಳು ತುಂಬಲಿವೆ. ಕೆರೆಗಳಿಗೆ ಸರಿಯಾದ ಕಾಲುವೆ ಮಾಡಿಸಿ ಎಲ್ಲಾ ಕೆರೆಗಳನ್ನು ನೀರು ತುಂಬಿಸುವಂತಹ ಯೋಜನೆಗಳ ಅಗತ್ಯದ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನ ಸೆಳೆಯಬೇಕು. ಇನ್ನೂ ಈಗಾಗಲೇ ತುಂಬಿರುವ ಕೆರೆಗಳ ರಾಜಕಾಲುವೆಗಳ ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವು ಮಾಡಿಸಿದ ನಂತರ ಎಚ್.ಎನ್ ವ್ಯಾಲಿ ನೀರು ಹರಿಸಿದ್ದರೆ ರೈತರ ಬೆಳೆ ನಷ್ಟವಾಗುತ್ತಿರಲಿಲ್ಲ. ಹಾಗಾಗಿ ಬೆಳೆ ನಷ್ಟವಾಗಿರುವ ರೈತರಿಗೆ ಎಚ್.ಎನ್ ವ್ಯಾಲಿ ಗುತ್ತಿಗೆದಾರರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನೂ ಈಗಾಗಲೇ ಬೆಳೆ ಪರಿಹಾರ ನೀಡುವ ಭರವಸೆ ನೀಡಿರುವ ಸರ್ಕಾರ ಅವೈಜ್ಞಾನಿಕವಾಗಿ ಪರಿಹಾರಧನ ನಿಗಧಿಪಡಿಸಿದೆ. ಹಾಗಾಗಿ ಬೆಳೆ ಹಾನಿಯಾಗಿರುವ ರೈತರಿಗೆ ಕನಿಷ್ಟ 25 ಹಾಗು 50 ಸಾವಿರ ಪರಿಹಾರ ಘೋಷಿಸಬೇಕು ಹಾಗೂ ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಶೀಘ್ರವಾಗಿ ಪರಿಹಾರ ಧನ ನೀಡುವ ಕೆಲಸವಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಯ ಗೌರವಾಧ್ಯಕ್ಷ ಕೋಟೆ ಚೆನ್ನೇಗೌಡ, ಕಾರ್ಯದರ್ಶಿ ಸಿ.ಎನ್.ಶ್ರೀಧರ, ಖಜಾಂಚಿ ಸಿ.ಬಿ.ಶ್ರೀನಿವಾಸ, ಪದಾಧಿಕಾರಿಗಳಾದ ಬಿ.ರಮೇಶ್, ಬಿ.ಎಂ.ಸೊಣ್ಣೇಗೌಡ, ಜಿ.ಎಂ.ಅಶ್ವತ್ಥರೆಡ್ಡಿ, ಎಂ.ವೆಂಕಟರೆಡ್ಡಿ, ಕೆ.ನಾಗರಾಜ, ರಮೇಶ್ ಹಾಜರಿದ್ದರು.