Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದ ದಲಿತ ಮುಖಂಡ ನಾರಾಯಣಸ್ವಾಮಿ ಹತ್ಯೆ ಖಂಡಿಸಿ ಸೆಪ್ಟೆಂಬರ್ 15 ರ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮೇಲೂರು ಮಂಜುನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮದ ಪರಿಶಿಷ್ಠ ಜಾತಿಗೆ ಸೇರಿದ ಮಹಿಳೆಗೆ ತೊಂದರೆಯಾದಾಗ ಆಕೆಯ ಬೆನ್ನೆಲುಬಾಗಿ ನಿಂತು ಪೊಲೀಸ್ ಠಾಣೆಯಲ್ಲಿ ಆಕೆಯಿಂದ ದುರು ಕೊಡಿಸಿದರೂ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ನಿಜಕ್ಕೂ ಆತಂಕದ ವಿಷಯ. ಇದನ್ನು ಕಂಡ ನಾಗರಿಕರು ಹಾಗು ದಲಿತ ಸಮುದಾಯ ಭಯಬೀತಗೊಂಡಿದೆ. ಇಂತಹ ಘಟನೆಗಳು ತಾಲ್ಲೂಕಿನಲ್ಲಿ ಮರುಕಳಿಸಬಾರದು ಹಾಗೂ ತಪ್ಪಿತಸ್ಥರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಇದೇ ಸೆ. 15 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು ಈ ಹೋರಾದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆ, ಸಾಮಾಜಿಕ ಚಿಂತಕರು, ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ, ದಲಿತರ ಮೇಲೆ ಪದೇ ಪದೇ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಜರುಗಿಸುವ ಜೊತೆಗೆ ದಲಿತ ಮುಖಂಡರು ಹಾಗೂ ದಲಿತ ಸಮುದಾಯದವರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು. ಕೊಲೆಯಾದ ನಾರಾಯಣಸ್ವಾಮಿ ಕುಟಂಬಕ್ಕೆ 50 ಲಕ್ಷ ಪರಿಹಾರ ಸೇರಿದಂತೆ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡುವ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಬದಲ್ಲಿ ದಲಿತ ಮುಖಂಡರಾದ ಟಿ.ಎ.ಚಲಪತಿ, ಅರುಣ್‌ಕುಮಾರ್, ಯಾಮ ನಾರಾಯಣಸ್ವಾಮಿ, ನಾಗ ನರಸಿಂಹ ಪಾಲ್ಗೊಂಡಿದ್ದರು.