Sidlaghatta : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ (Extracurricular Activities) ನೀಡಬೇಕು, ಏಕೆಂದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಲು ಸಹಕಾರಿಯಾಗುತ್ತವೆ ಎಂದು ರಾಯಲ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಮುಖ್ಯೋಪಾಧ್ಯಾಯ ಮಂಜುನಾಥ್ ಅವರು ತಿಳಿಸಿದರು.
ಸಹಕಾರ ಸಪ್ತಾಹದ (Cooperation Week) ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವೈ.ಎಂ. ಗಾನವಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕೇವಲ ಅಂಕಗಳನ್ನು ಪಡೆಯುವುದನ್ನೇ ಗುರಿಯಾಗಿಸಿಕೊಂಡು ಓದುವುದು ಮತ್ತು ಬರೆಯುವುದು ಕೇವಲ ಅಂಕಗಳನ್ನು ಪಡೆಯಲು ಮಾತ್ರ ನೆರವಾಗಬಹುದು. ಆದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸಿ ಪರಿಪೂರ್ಣವಾಗಿಸುತ್ತವೆ ಎಂದು ಮಂಜುನಾಥ್ ಹೇಳಿದರು. ಶಾಲಾ ಕಾಲೇಜು ಮಕ್ಕಳಲ್ಲಿ ಸಹಕಾರ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಸಹಕಾರ ಮಹಾ ಮಂಡಳವು ಚರ್ಚಾಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ ಅವರು, ವೈ.ಎಂ. ಗಾನವಿ ಅವರು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ಹರ್ಷ ತಂದಿದೆ ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಜರಿದ್ದರು.








