Sidlaghatta : ಜಾತಿ, ಮತ, ಧರ್ಮ ಹಾಗೂ ರಾಜ್ಯ, ದೇಶದ ಹಂಗಿಲ್ಲದೆ ಗಡಿಯನ್ನು ಮೀರಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಳಿಗೆ ಇದೆ. ಹಾಗಾಗಿ ಕ್ರೀಡಾ ಸ್ಪೂರ್ತಿಯಿಂದಲೆ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಡಾಲ್ಫಿನ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದಲ್ಲಿನ ಡಾಲ್ಫಿನ್ ಪಿಯು ಕಾಲೇಜು ಆವರಣದಲ್ಲಿ ನಡೆದ ಅಂತರ್ ಕಾಲೇಜು ವಾಲೀಬಾಲ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಾಠ ಪ್ರವಚನಕ್ಕೆ ನೀಡುವಷ್ಟೆ ಆಧ್ಯತೆಯನ್ನು ಕ್ರೀಡೆಗಳಿಗೂ ನೀಡಬೇಕು, ಕೇವಲ ಪರೀಕ್ಷೆ, ಅಂಕಗಳಿಗೆ ಮಾತ್ರ ಆಧ್ಯತೆ ನೀಡುವ ಪರಿಪಾಠ ಬಿಡಬೇಕೆಂದರು.
ಕ್ರೀಡೆಗಳು ನಮ್ಮ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆಯಲ್ಲದೆ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ಜತೆಗೆ ಊರು ದೇಶ ಎನ್ನುವ ಅಭಿಮಾನವನ್ನೂ ಹೆಚ್ಚಿಸುತ್ತದೆ ಎಂದು ಕ್ರೀಡೆಯ ಮಹತ್ವವನ್ನು ವಿವರಿಸಿದರು.
ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನೂ ಸಹ ಸಮಾನತೆಯಿಂದ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಿಂದಲ್ಲದೆ ಕೋಲಾರ, ಬೆಂಗಳೂರು ಗ್ರಾಮಾಂತರ ಹೊಸಕೋಟೆ, ಯಲಹಂಕ ಸೇರಿದಂತೆ ಜಿಲ್ಲೆಯ ನಾನಾ ಕಡೆಯಿಂದ 43 ಕಾಲೇಜುಗಳ ವಾಲೀಬಾಲ್ ತಂಡಗಳು ಭಾಗವಹಿಸಿದ್ದವು.
ದೇವನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಬಹುಮಾನ 10 ಸಾವಿರ ರೂ.ನಗದು, ಟ್ರೋಫಿ, ಚಿಕ್ಕಬಳ್ಳಾಪುರದ ಬಿ.ಜಿ.ಎಸ್.ನ ಐ.ಎಂ.ಎಸ್ ತಂಡ ದ್ವಿತೀಯ ಸ್ಥಾನ 7000 ರೂ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಡಾಲ್ಫಿನ್ ಪಿಯು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಆಡಳಿತಾಧಿಕಾರಿ ಚಂದನ ಅಶೋಕ್, ಕಾರ್ಯದರ್ಶಿ ಕೃಷ್ಣಪ್ಪ, ಪ್ರಿನ್ಸಿಪಾಲ್ ನೂರ್‌ಜಾನ್ ಬೇಗಂ, ಡಾ.ಸುದರ್ಶನ್, ಎನ್.ಮುನಿಶಾಮಪ್ಪ, ಆರೀಫ್ ಪಾಷ ಹಾಜರಿದ್ದರು.