ಕೆರೆಯಲ್ಲಿ ಸುರಿದ ಅವಧಿ ಮೀರಿದ ಔಷಧಿ: ಔಷಧಿ ಅಂಗಡಿಗಳಿಂದ ಬಂದಿರುವ ಶಂಕೆ

Sidlaghatta : ಶಿಡ್ಲಘಟ್ಟದ ಗೌಡನಕೆರೆಯಲ್ಲಿ ಸುರಿಯಲಾಗಿದ್ದ ಅವಧಿ ಮೀರಿದ ಔಷಧಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಸಂಪೂರ್ಣವಾಗಿ ಸಂಗ್ರಹಿಸಿ ಆಸ್ಪತ್ರೆಗೆ ತಂದಿದ್ದಾರೆ. ಈ ಕುರಿತು ನವೆಂಬರ್ 22ರಂದು ಪ್ರಕಟವಾಗಿದ್ದ ವರದಿಗೆ ಇಲಾಖೆ ತಕ್ಷಣ ಸ್ಪಂದಿಸಿದೆ.
ಕೆರೆಯ ಅಂಗಳದಲ್ಲಿ ಮೂಟೆಗಟ್ಟಲೆ ಔಷಧಿ ಸುರಿದಿರುವ ಬಗ್ಗೆ ಅವಧಿ ಮೀರಿದ ಔಷಧಿ ಕೆರೆಯಂಗಳದಲ್ಲಿ ಸುರಿದಿರುವ ವರದಿ ಪ್ರಕಟವಾದ ಮರುದಿನವೇ ಪರಿಶೀಲನೆ ನಡೆದಿದೆ.
ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್ ಅವರ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ದೇವರಾಜ್, ಕೀರ್ತಿ, ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಗೌಡನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಯಲ್ಲಿ ಸುರಿದಿದ್ದ ಎಲ್ಲ ಔಷಧಿಗಳನ್ನು ಸಂಗ್ರಹಿಸಿ ಆಸ್ಪತ್ರೆಗೆ ಕೊಂಡೊಯ್ದರು.

ಔಷಧಿ ಎಲ್ಲಿಂದ ಬಂದಿರಬಹುದು?
ಸಂಗ್ರಹಿಸಿದ ಔಷಧಿಗಳನ್ನು ಮೇಲ್ನೋಟಕ್ಕೆ ಪರಿಶೀಲಿಸಿದಾಗ, ಇವನ್ನು ಔಷಧಿ ಅಂಗಡಿಗಳಿಂದ ತಂದು ಕೆರೆಯಲ್ಲಿ ಸುರಿದಿರುವ ಸಾಧ್ಯತೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕಿ ಸರಿತಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಮುಂದೇನು?
ಔಷಧಿಗಳು ಎಲ್ಲಿಂದ ಬಂದವು ಮತ್ತು ಕೆರೆಯಲ್ಲಿ ಸುರಿದವರು ಯಾರು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಕೆರೆಯಲ್ಲಿ ಅವಧಿ ಮೀರಿದ ಔಷಧಿ ಸುರಿಯುವುದರಿಂದ ಪರಿಸರ ಹಾಗೂ ಜಲಮೂಲಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಇಲಾಖೆಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

For Daily Updates WhatsApp ‘HI’ to 7406303366
Summary in English
Health department staff led by in-charge taluk health officer Dr. Ramesh collected the expired medicines dumped in Gowdana Kere lake in Sidlaghatta on Monday and took them to the hospital, a day after a report on the dumping was published on 22 November. Officials said the medicines appear to have come from pharmacies, and the district assistant drugs controller and the district health officer have been informed. Authorities still have to establish the source and who dumped them, as expired medicines in a lake can harm the environment and water sources.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



