Sidlaghatta : ತಮ್ಮ ಸುತ್ತ ಮುತ್ತಲಿನ ಪರಿಸರ ಚೆನ್ನಾಗಿದ್ದಾಗ ಮಾತ್ರ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳು ಜೀವಿಸಲು ಸಾಧ್ಯವಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಕೇಂದ್ರ ಕಚೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್‌ಸುವರ್ಣ ಹೇಳಿದರು.
ಶಿಡ್ಲಘಟ್ಟ ನಗರದ ಗೌಡನಕೆರೆಯ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಸಂಸ್ಥೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಈಗಾಗಲೇ ನಗರದ ಗೌಡನಕೆರೆಯಲ್ಲಿ ಹೂಳೆತ್ತುವ ಕೆಲಸ ಮಾಡಲಾಗಿದ್ದು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರದ ಉಳಿವಿಗಾಗಿ ಶ್ರಮಿಸಬೇಕು.
ಉತ್ತಮ ಆರೋಗ್ಯವಂತರಾಗಿರಲು ಉತ್ತಮ ಪರಿಸರದಿಂದ ಮಾತ್ರ ಸಾಧ್ಯ, ಇವತ್ತಿನ ದಿನಗಳಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಹಾಗು ಮನುಷ್ಯನ ದುರಾಸೆಯಿಂದ ಪರಿಸರದಲ್ಲಿ ಗಿಡಮರಗಳನ್ನು ನಾಶ ಮಾಡುತ್ತಿದ್ದು ಇದರಿಂದ ಜಾಗತೀಕರಣ ಹೆಚ್ಚುತ್ತಿದ್ದು ಶುದ್ಧವಾದ ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಇದರಿಂದ ಅನೇಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಜಾಗತಿಕ ತಾಪಮಾನ ಕಡಿಮೆ ಮಾಡಲು ಕಾಲ ಕಾಲಕ್ಕೆ ಮಳೆಯಾಗಲು ಹಾಗೂ ವಾತಾವರಣದಲ್ಲಿ ಅತಿ ಹೆಚ್ಚು ಆಮ್ಲಜನಕ ಪಡೆಯಲು ಗಿಡಮರಗಳನ್ನು ಬೆಳೆಸಿ ನೆಲ ಜಲ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ವರ್ಗಾಯಿಸಿವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್, ಕೆರೆ ಸಮಿತಿ ಅಧ್ಯಕ್ಷ ಬಿ.ಸಿ.ನಂದೀಶ್, ಜನಜಾಗೃತಿ ವೇದಿಕೆಯ ಸದಸ್ಯ ಹಿತ್ತಲಹಳ್ಳಿ ಸುರೇಶ್, ಮೇಲ್ವಿಚಾರಕರಾದ ದಯಾನಂದ್, ಮಂಜುನಾಥ್, ಸೇವಾ ಪ್ರತಿನಿಧಿಗಳು ಹಾಗೂ ಗಣ್ಯರು ಹಾಜರಿದ್ದರು.