Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಈರೇಬಲ್ಲ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದ 11 ಮಂದಿ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ 10 ಮಂದಿ ನಿರ್ದೇಶಕರು ಹಾಗೂ ಜೆಡಿಎಸ್‌ನ ಮೂವರು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದು ಹೀರೆಬಲ್ಲ ಡೇರಿಯ ಆಡಳಿತ ಮಂಡಳಿಯು ಸತತವಾಗಿ ನಾಲ್ಕನೇ ಅವಧಿಗೂ ಕಾಂಗ್ರೆಸ್ ಪಾಲಾಗಿದೆ.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಮುನಿಕೃಷ್ಣಪ್ಪ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮುನಿರಾಜು ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಪರಿಶಿಷ್ಟ ಜಾತಿಯ ದ್ಯಾವಪ್ಪ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಅಕ್ಕಾಯಮ್ಮ, ರಾಜೇಶ್ವರಿ, ಸಾಮಾನ್ಯ ಕ್ಷೇತ್ರದಿಂದ ಪ್ರಕಾಶ್, ಸುಬ್ರಮಣಿ, ಗಂಗರೆಡ್ಡಿ, ನಾಗೇಶ್, ರಾಮಚಂದ್ರಪ್ಪ, ಬೀರಪ್ಪ, ಮುನಿರಾಜು ಅವರು ಚುನಾವಣೆ ಎದುರಿಸಿ ವಿಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರ ನಾಯಕತ್ವದಲ್ಲಿ ಕ್ಷೇತ್ರದಲ್ಲಿ ನಡೆದ ಮೊದಲ ಡೇರಿ ಚುನಾವಣೆ ಇದಾಗಿದ್ದು ಕಾಂಗ್ರೆಸ್ ಬೆಂಬಲಿತರ ಜಯಭೇರಿಯಿಂದ ಕಾಂಗ್ರೆಸ್ ಪಾಳಯದಲ್ಲಿ ಸಂತಸ ಮನೆ ಮಾಡಿದೆ.
ಚುನಾವಣೆಯಲ್ಲಿ ಗೆದ್ದ ಎಲ್ಲ ನಿರ್ದೇಶಕರುಗಳನ್ನು ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅಭಿನಂದಿಸಿದರು. ಈ ವೇಳೆ ಮಾತನಾಡಿದ ರಾಜೀವ್‌ಗೌಡ ಅವರು, ವಿಧಾನಸಭೆ ಚುನಾವಣೆಯ ನಂತರ ನನ್ನ ನಾಯಕತ್ವದಲ್ಲಿ ನಡೆದ ಮೊದಲ ಡೇರಿ ಚುನಾವಣೆ. ಈ ಮೊದಲ ಗೆಲವು ಮುಂದಿನ ಎಲ್ಲ ಚುನಾವಣೆಗಳ ದಿಕ್ಸೂಚಿಯಾಗಲಿದ್ದು ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತಂದಿದೆ. ಮುಂದೆ ಎದುರಾಗುವ ಎಲ್ಲ ಚುನಾವಣೆಗಳನ್ನೂ ಸಮರ್ಥವಾಗಿ ಎದುರಿಸುತ್ತೇವೆ ಎಂದರು.
ಮುಖಂಡರಾದ ರಾಜೀವ್‌ಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬಸವಾಪಟ್ಟಣ ಬೈರೇಗೌಡ, ಕಷ್ಣಪ್ಪ, ಅಶ್ವತ್ಥಪ್ಪ, ಬಿ.ವಿ.ಸೊಣ್ಣಪ್ಪ, ಸುಗಟೂರು ಚಂದ್ರೇಗೌಡ, ಸುರೇಶ್, ರಾಜಣ್ಣ, ನಂಜೇಗೌಡ ಹಾಗೂ ವಿಜೇತ ಎಲ್ಲ ಕಾಂಗ್ರೆಸ್ ಬೆಂಬಲಿತ ನಿದೇಶಕರುಗಳು ಹಾಜರಿದ್ದರು.