Sidlaghatta : ಪ್ರತಿ ತಾಲ್ಲೂಕಿನಲ್ಲೂ ಕುರುಬ ಸಮುದಾಯಕ್ಕೆ ಸರ್ಕಾರದಿಂದ ನಿವೇಶನ ಜಮೀನು ಮಂಜೂರು ಮಾಡಿಸಿ ಸಮುದಾಯ ಭವನ, ಶೈಕ್ಷಣಿಕ ಸಂಸ್ಥೆ ನಿರ್ಮಾಣಕ್ಕೆ ಎಲ್ಲರ ಪ್ರಾಮಾಣಿಕ ಪ್ರಯತ್ನ ಅಗತ್ಯ, ಆಗಲೆ ಸಮುದಾಯದ ಅಭಿವೃದ್ದಿ ಸಾಧ್ಯ, ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶಿಡ್ಲಘಟ್ಟದ ಡಾಲ್ಫಿನ್ ನಾಗರಾಜ್ ತಿಳಿಸಿದರು.
ನಗರದಲ್ಲಿನ ಡಾಲ್ಫಿನ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾರಿಗೇ ಆಗಲಿ ಯಾವುದೆ ಅಧಿಕಾರ ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿರುವಾಗ ಮಾಡಿದ ಸಾಮಾಜಿಕ ಕಾರ್ಯಗಳಷ್ಟೆ ಶಾಶ್ವತವಾಗಿ ಇರುತ್ತದೆ. ಹಾಗಾಗಿ ಅಧಿಕಾರವನ್ನು ದುರುಪಯೋಗ ಅಥವಾ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.
ನಾನು ಬಯಸಿ ಈ ಅಧಿಕಾರ ಪಡೆದವನಲ್ಲ, ಜಿಲ್ಲೆಯ ಎಲ್ಲ ತಾಲ್ಲೂಕಿನ ಕುಲ ಬಾಂಧವರು ವಿಶ್ವಾಸವಿಟ್ಟು ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ನಾನು ಇದನ್ನು ಅಧಿಕಾರ ಎಂದುಕೊಳ್ಳುವುದಿಲ್ಲ ಬದಲಿಗೆ ಜವಾಬ್ದಾರಿ ಎಂದುಕೊಳ್ಳುತ್ತೇನೆ ಎಂದರು.
ನಿಮ್ಮೆಲ್ಲರ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ, ಸಮುದಾಯದ ಅಭಿವೃದ್ದಿಗೆ ನಿಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದು ಹೇಳಿದರು.
ಎ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕುರುಬರ ಸಂಘದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ರಾಮಾಂಜಿನಪ್ಪ, ಖಜಾಂಚಿ ಕೆ.ಸಿ.ನಾರಾಯಣಸ್ವಾಮಿ, ಹಿರಿಯರಾದ ಎಂ.ಆರ್.ಮುನಿಕೃಷ್ಣಪ್ಪ, ಸಿ.ರಾಮಣ್ಣ, ಹಿತ್ತಲಹಳ್ಳಿ ವೆಂಕಟೇಶ್, ಮುನಿಬೀರಪ್ಪ, ಸಾದಲಿ ನಾರಾಯಣಸ್ವಾಮಿ, ಎ.ರಾಮಚಂದ್ರಪ್ಪ ಹಾಜರಿದ್ದರು.