Sidlaghatta : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಪರ ಇದೆ. ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದು ಇದನ್ನೆ ಮತದಾರರ ಬಳಿ ಮನವರಿಕೆ ಮಾಡಿಕೊಟ್ಟು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ವಿಧಾನ ಪರಿಷತ್ ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಮತಯಾಚನೆ ನಡೆಸಲು ಆಗಮಿಸಿದ್ದ ಅವರು, ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಜಾರಿಗೆ ನಮ್ಮ ಸರಕಾರ ಮುಂದಾಗಿದೆ. ಈ ಅಂಶವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಇತ್ತು. ಅದನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಪಕ್ಷ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.
ಇದಿಷ್ಟೆ ಅಲ್ಲ ಗ್ಯಾರಂಟಿ ಯೋಜನೆ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿರುವ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರದ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ರ್ಸ್ಪಸುವ ಡಿ.ಟಿ.ಶ್ರೀನಿವಾಸ್ ಅವರಿಗೆ ಮನ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮಾತನಾಡಿ, ತಾಲ್ಲೂಕಿನಲ್ಲಿ 540 ಕ್ಕೂ ಹೆಚ್ಚು ಶಿಕ್ಷಕ ಮತದಾರರಿದ್ದು ಅವರೆಲ್ಲರನ್ನೂ ಭೇಟಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಹಾಕಿಸಿ ನಮ್ಮ ಪಕ್ಷದ ಅಕೃತ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ ಎಂದರು.
ಶ್ರೀನಿವಾಸ್ ಅವರು ರಾಜಕೀಯ ಹಿನ್ನಲೆ ಕುಟುಂಬದವರು, ಜನರ ಮದ್ಯೆ ಬೆರೆತು ಕಾರ್ಯನಿರ್ವಹಿಸುವುದು ಅವರಿಗೆ ಹುಟ್ಟಿನಿಂದಲೆ ಬಂದಿದೆ. ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪೂರ್ಣವಾದ ಅರಿವಿದೆ.
ಹಾಗಾಗಿ ಅವರನ್ನು ಗೆಲ್ಲಿಸಿ ವಿಧಾನಪರಿಷತ್ ಗೆ ಕಳುಹಿಸಿದರೆ ಅವರು ಸದನದಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಬಲ್ಲರು, ಹಾಗಾಗಿ ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ತಮಗೆ ಗೊತ್ತಿರುವ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ವಿವರಿಸಿ ಮತ ಹಾಕಿಸುವಂತೆ ಕೋರಿದರು.
ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಕಾರ್ಯಕರ್ತರ ಸಭೆಯ ನಂತರ ನಗರದಲ್ಲಿನ ಡಾಲ್ಫಿನ್ ಪಬ್ಲಿಕ್ ಸ್ಕೂಲ್, ವಾಸವಿ ಶಾಲೆ, ಬಿಜಿಎಸ್, ಕ್ರೆಸೆಂಟ್, ಶ್ರೀಸರಸ್ವತಿ ಕಾನ್ವೆಂಟ್, ಸರಕಾರಿ ಜೂನಿಯರ್ ಕಾಲೇಜು, ಶಾರದಾ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಲ್ಲಿ ಮತ ನೀಡುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ, ಮುಖಂಡರಾದ ಡಾಲ್ಫಿನ್ ನಾಗರಾಜ್, ಟಿ.ಕೆ.ನಟರಾಜ್, ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶ್, ಅಶ್ವತ್ಥ್‌ನಾರಾಯಣ್, ಬಿ.ವಿ.ಮುನೇಗೌಡ, ಕೆ.ಗುಡಿಯಪ್ಪ, ಚಿದಾನಂದಮೂರ್ತಿ, ಗುಡಿಹಳ್ಳಿ ನಾರಾಯಣಸ್ವಾಮಿ, ರಾಮಚಂದ್ರಪ್ಪ, ಅಪ್ಸರ್‌ಪಾಷ, ಅನಿಲ್‌ಕುಮಾರ್, ಲಕ್ಷ್ಮಣ್, ಕೃಷ್ಣಮೂರ್ತಿ, ವರದಣ್ಣ ಹಾಜರಿದ್ದರು.