Sidlaghatta : ನವೆಂಬರ್ 2 ಮತ್ತು 3 ರಂದು 3, 6, 9 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶಯಕ್ಷಣಿಕ ಸಾಧನಾ ಸಮೀಕ್ಷೆ ನಡೆಯಲಿದ್ದು ಈ ಸಂಬಂಧವಾಗಿ ಸಮೀಕ್ಷಾ ಕಾರ್ಯವು ನಡೆಯಲಿರುವ ತಾಲ್ಲೂಕಿನ ಆಯ್ದ ಶಾಲೆಗಳ ಮುಖ್ಯಶಿಕ್ಷಕರ ಪೂರ್ವ ಸಿದ್ಧತಾ ಸಭೆಯು ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆಯಿತು.
ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ಸಾಧನೆಯ ಹಾದಿ ಹಿಡಿದು ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸಮೀಕ್ಷೆ ಸಹಕಾರಿಯಾಗಿದೆ. ಮಕ್ಕಳ ಭೌದ್ಧಿಕ ಮತ್ತು ಮಾನಸಿಕ ವಯಸ್ಸು, ಸಾಮರ್ಥ್ಯಾಧಾರಿತ ಕಲಿಕೆಯನ್ನು ಅಳೆಯಬಹುದಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಆಯ್ದ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ, ವಸತಿಯುತ ಶಾಲೆಗಳಲ್ಲದೇ ರಾಜ್ಯ ಮತ್ತು ಮತ್ತು ಐ.ಸಿ.ಎಸ್.ಸಿ ಪಠ್ಯಕ್ರಮ ಅನುಸರಿಸುವ ಕೆಲವು ಶಾಲೆಗಳನ್ನು ಯಾದೃಚ್ಛಿಕ ಮಾದರಿ ರೀತಿ ಎನ್.ಸಿ.ಇ.ಆರ್.ಟಿ ಮತ್ತು ಪರಖ್ ವತಿಯಿಂದಲೇ ಆಯ್ದುಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 85 ಶಾಲೆಗಳಲ್ಲಿ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಮೀಕ್ಷದಾರರಿಗೆ ತರಬೇತಿ ನೀಡಲಾಗಿದೆ ಎಂದರು.
ಬಿ.ಆರ್.ಸಿ ಸಮನ್ವಯಾಧಿಕಾರಿ ತ್ಯಾಗರಾಜು, ನೋಡಲ್ ಅಧಿಕಾರಿಗಳಾದ ಬೈರಾರೆಡ್ಡಿ, ಭಾಸ್ಕರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಸಹಕಾರ್ಯದರ್ಶಿ ಎಂ.ಶಿವಕುಮಾರ್, ಸಂಪನ್ಮೂಲವ್ಯಕ್ತಿ ಮಂಜುನಾಥ್, ಲಕ್ಷ್ಮಿನಾರಾಯಣ್, ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.