Sidlaghatta : ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಪ್ರೀತಿಸಿದ ಯುವತಿ ಹಾಗೂ ಆಕೆಯನ್ನು ಬೆಂಬಲಿಸಿದ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಯವರು ಮತ್ತು ಯುವತಿಯ ಕಡೆಯವರು ಯುವಕನ್ನು ಥಳಿಸಿ ಒಪ್ಪಿಸಿ ಮದುವೆ ಮಾಡಿಸಿದ ಘಟನೆ ನಡೆದಿದೆ.
ಶಿಡ್ಲಘಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ನಡೆದ ಈ ಮದುವೆಯು ಈಗ ವೈರಲ್ ಆಗುತ್ತಿವೆ.
ಚಿಕ್ಕಬಳ್ಳಾಪುರ ತಾಲ್ಲೂಕು ಇಟ್ಟಪ್ಪನಹಳ್ಳಿಯ ಯುವತಿಯನ್ನು ಅದೇ ತಾಲ್ಲೂಕು ಚಿಕ್ಕಕಿರುಗಂಬಿ ಗ್ರಾಮದ ಚೇತನ್ ಎನ್ನುವಾತ ಕಳೆದ ಒಂದೂವರೆ ಎರಡು ವರ್ಷದಿಂದ ಪ್ರೀತಿಸುತ್ತಿದ್ದು ಯುವತಿ ಇದೀಗ ಆರು ತಿಂಗಳ ಗರ್ಭಿಣಿ ಆಗಿದ್ದಾಳೆ ಎನ್ನಲಾಗಿದೆ.
ಯುವತಿಯನ್ನು ಮದುವೆ ಆಗಲು ಯುವಕ ನಿರಾಕರಿಸಿದ್ದು ಮಾತುಕತೆಗೆಂದು ಯುವಕ ಹಾಗೂ ಯುವತಿ ಕಡೆಯವರು ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ.
ಈ ವೇಳೆ ಯುವಕನು ನನ್ನಿಂದಲೆ ಯುವತಿ ಗರ್ಭಿಣಿ ಆಗಿದ್ದಾಳೆ ಎನ್ನುವುದಕ್ಕೆ ಏನಿದೆ ಆಧಾರ ಎಂದು ಕೇಳಿದ್ದಾನೆ ಎಂದು ಆರೋಪಿಸಿ ಯುವತಿ ಹಾಗೂ ಆಕೆಯ ಜತೆಗಿದ್ದ ಕೆಲ ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಯುವತಿಯು ಯುವಕನ ಮೇಲೆ ಹಲ್ಲೆ ನಡೆಸಿದ್ದು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ.
ನಂತರ ಅಲ್ಲಿ ಸೇರಿದ್ದ ಕೆಲ ದಲಿತ ಸಂಘಟನೆಗಳ ಮುಖಂಡರು, ಮಹಿಳಾ ಸಂಘಟನೆಗಳ ಮುಖಂಡರು ಯುವಕ ಹಾಗೂ ಯುವತಿಯ ಮನವೊಲಿಸಿ ಇಬ್ಬರಿಗೂ ಸ್ಥಳದಲ್ಲೆ ಮದುವೆ ಮಾಡಿಸಿದ್ದಾರೆ. ಈ ಎಲ್ಲವನ್ನೂ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಆ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.