ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಸ್ತರಣಾ ವಿಭಾಗದ ವತಿಯಿಂದ ಅಪ್ಪೆಗೌಡನಹಳ್ಳಿ ಗ್ರಾಮದಲ್ಲಿ ಹವಾಮಾನ ಚತುರ ಕೃಷಿ ಯೋಜನೆ ಅಡಿಯಲ್ಲಿ ಎಂ.ಎಲ್-365 ರಾಗಿ ತಳಿಯ ಪ್ರಾತ್ಯಕ್ಷಿಕೆ ತಾಕಿನಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕ ಡಾ. ವೈ.ಎನ್.ಶಿವಲಿಂಗಯ್ಯ ಮಾತನಾಡಿ, “ಈ ತಳಿಯು ಬೆಂಕಿ ರೋಗ ಮತ್ತು ಇಲುಕ ರೋಗ ನಿರೋಧಕ ತಳಿಯಾಗಿದೆ. 100 ರಿಂದ 105 ದಿನಗಳಲ್ಲಿ ಕಟಾವಿಗೆ ಬರಲಿದೆ ಎಂದರು. ಉತ್ತಮ ಗುಣಮಟ್ಟದ 10-12 ಕ್ವಿಂಟಾಲ್ ಧಾನ್ಯವನ್ನು ಮತ್ತು 2 ರಿಂದ 2.5 ಟನ್ ರಷ್ಟು ಒಣಹುಲ್ಲನ್ನು ಪ್ರತಿ ಏಕರೆಯಿಂದ ನಿರೀಕ್ಷಿಸಬಹುದು” ಎಂದು ತಿಳಿಸಿದರು.
ಪ್ರಾತ್ಯಕ್ಷಿಕೆ ತಾಕುಗಳಲ್ಲಿ ನ್ಯಾನೋ ಯೂರಿಯಾ(5ಗ್ರಾಂ ಪ್ರತಿ ಲೀಟರ್ ನೀರಿಗೆ) ಮತ್ತು 19:19:19 ನೀರಿನಲ್ಲಿ ಕರಗುವ ರಸಗೊಬ್ಬರವನ್ನು (5ಗ್ರಾಂ ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪಡಿಸಿದರೆ ಬೆಳೆಯ ಬೆಳವಣಿಗೆ ಉತ್ತಮವಾಗಿ ಬರುತ್ತದೆ. 7 ರಿಂದ 10 ರಷ್ಟು ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು ಎಂದು ವಿವರಿಸಿದರು.
ಗ್ರಾಮಸ್ಥರಾದ ಎ.ಎಂ.ತ್ಯಾಗರಾಜ್, ಮುನಿಂದ್ರ, ಕೃಷ್ಣೆ ಗೌಡ, ವೆಂಕಟೇಶ, ಹರೀಶ್, ಅರ್ಜುನ್, ಭೈರ ರೆಡ್ಡಿ, ರಾಘವೇಂದ್ರ, ಭಾರ್ಗವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.