Muttur, Sidlaghatta : ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ತಾಯಿ ಮತ್ತು ಮಗಳು ಒಟ್ಟಿಗೆ SSLC ಪರೀಕ್ಷೆ ಬರೆದಿದ್ದಾರೆ.
ತಾಲ್ಲೂಕಿನ ಮುತ್ತೂರು ಗ್ರಾಮದ ನಿವಾಸಿಗಳಾದ ಛಾಯಮ್ಮ(36) ಹಾಗೂ ಶ್ರೀವಾಣಿ ಎಂಬ ತಾಯಿ – ಮಗಳು ಈ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶ್ರೀವಾಣಿ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಶೈಕ್ಷಣಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರೆ ಅವರ ತಾಯಿಯಾದ ಛಾಯಮ್ಮ ಪುನರಾವರ್ತಿತ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಛಾಯಮ್ಮ ಅವರು ತನ್ನ ಮಗಳು ಓದುವ ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾಗಿದ್ದಾರೆ.
“ನಮ್ಮ ತವರೂರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ. ಚಿಕ್ಕಬಳ್ಳಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಒಂಬತ್ತನೇ ತರಗತಿಯವರೆಗೂ ಓದಿದ್ದೆ. ಮದುವೆ ಆದ ನಂತರ ಮುತ್ತೂರಿಗೆ ಬಂದೆ. ನನಗೆ ಮೂವರು ಹೆಣ್ಣುಮಕ್ಕಳು. ಮೂವರೂ ಚೆನ್ನಾಗಿ ಓದುವರು. ಮೊದಲ ಮಗಳು ದ್ವಿತೀಯ ಪಿಯುಸಿ, ಎರಡನೆಯವಳು ಎಸ್ಸೆಸ್ಸೆಲ್ಸಿ ಮತ್ತು ಮೂರನೆಯವಳು ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಮನೆಯಲ್ಲಿ ಮಕ್ಕಳು, ಶಾಲೆಯ ಶಿಕ್ಷಕರು ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ಮಕ್ಕಳೊಂದಿಗೆ ನಾನೂ ಓದಲು ಪ್ರಾರಂಭಿಸಿದೆ. ನನ್ನ ಮಗಳ ಜೊತೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವುದು ತುಂಬಾ ಸಂತಸದ ವಿಷಯ” ಎಂದು ಛಾಯಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಮಗಳು ಶ್ರೀ ವಾಣಿ ಮಾತನಾಡಿ, “ನನ್ನ ತಾಯಿಯ ಜೊತೆ ಪರೀಕ್ಷೆ ಬರೆಯುತ್ತಿರುವುದು ನನಗೆ ಸಂತೋಷ ಉಂಟು ಮಾಡಿದೆ. ಜೊತೆಗೆ ಈ ಶೈಕ್ಷಣಿಕ ವರ್ಷದಲ್ಲಿ ನಾನು ಮತ್ತು ನಮ್ಮ ತಾಯಿ ಇಬ್ಬರೂ ಉತ್ತಮ ಅಂಕದಲ್ಲಿ ಉತ್ತೀರ್ಣರಾಗುತ್ತೇವೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.