Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು ಹಾಗೂ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಸಂವಾದದಲ್ಲಿ ತಾಂತ್ರಿಕವಾಗಿ ಬಳಸುವ ಕ್ಲ್ಯಾಟ್ ಆಪ್ ಬಳಕೆಯ ವಿಧಾನ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅದೇ ರೀತಿಯಾಗಿ ನೈಸರ್ಗಿಕವಾಗಿ ಹಾಗೂ ಪ್ರಾಯೋಜಿಕವಾಗಿ ಯಾವ ರೀತಿ ಪಂಚಾಯಿತಿ ಅಭಿವೃದ್ಧಿಯನ್ನು ಮಾಡಲು ಕ್ರಮವಹಿಸಲಾಯಿತು ಎಂಬುವುದರ ಬಗ್ಗೆ ಮಾಹಿತಿ ಕಲೆಹಾಕಿದರು.
ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡನಾಟಿ ಮಾಡಿರುವ ಸ್ಧಳ ಸೇರಿದಂತೆ ಹಿತ್ತಲಹಳ್ಳಿ ಹಾಗೂ ಬೆಳ್ಳೂಟಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು.
ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮಪಂಚಾಯಿತಿ ಹಿತ್ತಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಪರಿಸರ ಸ್ನೇಹಿ ಶುದ್ದ ನೀರಿನ ಘಟಕದಿಂದ ಹೊರಹೋಗುವ ತ್ಯಾಜ್ಯ ನೀರು ಪಕ್ಕದ ತೊಟ್ಟಿಯಲ್ಲಿ ಸಂಗ್ರಹ ಮಾಡಿ, ಗ್ರಾಮಸ್ಥರು ಮರುಬಳಕೆ ಮಾಡುವುದು ಮತ್ತು ಘಟಕದ ಎದರುಗಡೆ ಇರುವ ಎರಡು ದೇವಾಲಯಗಳಿಗೆ ಈ ನೀರಿನ ಬಳಕೆ ಮಾಡುತ್ತಿರುವುದು ಗಮನಿಸಿದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಕಡೆ ಶುದ್ಧ ನೀರಿನ ಘಟಕಗಳ ಹತ್ತಿರ ಈ ರೀತಿ ತೊಟ್ಟಿ ಕಟ್ಟುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ನೀರಿನ ಘಟಕ ಮತ್ತು ತೊಟ್ಟಿಯ ಪೋಟೋ ಹಾಕಿದರು.
ಪರಿಸರ ಗ್ರಾಮಾಭಿವೃದ್ಧಿ ಸಮಿತಿಯವರು ಹಾಗೂ ಎಫ್.ಇ.ಎಸ್ ಸಂಸ್ಥೆಯವರ ಹೊಂದಾಣಿಕೆಯಿಂದ ಗ್ರಾಮಗಳ ಅಭಿವೃದ್ಧಿಯ ವಿಧಾನಗಳ ಬಗ್ಗೆ ಚರ್ಚಿಸಲಾಯಿತು, ನಂತರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಬಳಿ ಇರುವ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಜಿ.ಮುನಿರಾಜ, ಆನೂರು ಪಂಚಾಯಿತಿ ಅಧ್ಯಕ್ಷ ಎಚ್.ಆರ್.ವೆಂಕಟೇಶ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ವಿಜಯೇಂದ್ರ, ವಿಶ್ವಾಸ್, ಸಂತೋಷ್, ಪ್ರಕಾಶ್, ಪಿಡಿಓ ಕಾತ್ಯಾಯಿನಿ, ಎಫ್.ಇ.ಎಸ್ ಸಂಸ್ಥೆಯ ರಮೇಶ್, ಮಳ್ಳೂರು ಪಂಚಾಯಿತಿ ಪಿಡಿಓ ಕೃಷ್ಣಪ್ಪ, ತಾಂತ್ರಿಕ ಸಿಬ್ಬಂದಿ ವರ್ಗದವರು, ನರೇಗಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.