Hujagur, Sidlaghatta : ಪೌಷ್ಟಿಕ, ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ. ಉತ್ತಮ ಆರೋಗ್ಯವಂತ ಗರ್ಭಿಣಿ ಹಾಗೂ ಮಕ್ಕಳು ದೇಶದ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜು ತಿಳಿಸಿದರು.
ತಾಲ್ಲೂಕಿನ ಹುಜಗೂರು ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಮಾಸಾಚರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕತೆಯ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮತ್ತು ಆರು ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಕಾರ್ಯಕ್ರಮ ಇದೆ. ಜತೆಗೆ ತಾಯಂದರಿಗೆ ಪೌಷ್ಟಿಕ ಆಹಾರದ ಸೇವನೆಯ ಬಗೆ, ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೊರಗಡೆ ಸಿಗುವ ಕುರುಕುಲು ತಿಂಡಿ ತಿನಿಸುಗಳನ್ನು ನೀಡುವುದನ್ನು ಕಡಿಮೆ ಮಾಡಬೇಕು. ಮನೆಯಲ್ಲಿ ಸಿಗುವ ತಯಾರಿಸುವ ಉತ್ತಮ ಗುಣಮಟ್ಟದ ಸೊಪ್ಪು ಹಣ್ಣು ತರಕಾರಿಗಳಂತ ಪೌಷ್ಟಿಕ ಆಹಾರವನ್ನು ನೀಡುವತ್ತ ಹೆಚ್ಚು ಗಮನ ಹರಿಸಬೇಕೆಂದರು.
ಶಿಶು ಅಭಿವೃದ್ದಿ ಯೋಜನಾಕಾರಿ ಬಿ.ನವತಾಜ್ ಮಾತನಾಡಿ, ತಾಲೂಕಿನಲ್ಲಿ 54 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಅವರಿಗೆ ನಿರಂತರವಾಗಿ ಪೌಷ್ಟಿಕ ಆಹಾರವನ್ನು ನೀಡುವುದರ ಜತೆಗೆ ಅವರ ತಾಯಂದರಿಗೆ ಅರಿವು ಮೂಡಿಸಿದರ ಪರಿಣಾಮ ಇದೀಗ ತಾಲ್ಲೂಕಿನಲ್ಲಿ ಕೇವಲ 9 ಮಂದಿ ಮಾತ್ರವೇ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂದು ಹೇಳಿದರು.
ನಮ್ಮ ಸುತ್ತ ಮುತ್ತ ಸಿಗುವ ನಾನಾ ಬಗೆಯ ಸೊಪ್ಪು ತರಕಾರಿ ಹಣ್ಣು ಮತ್ತು ಮನೆಯಲ್ಲಿ ತಯಾರಿಸುವಂತ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ಅವುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಎಸಿಡಿಪಿಒ ಲಕ್ಷ್ಮಿದೇವಮ್ಮ, ಪೋಷಣ್ ಅಭಿಯಾನದ ಸಂಯೋಜಕ ಕೆ.ಎನ್.ಶಿವಪ್ಪ, ಆರೋಗ್ಯ ಇಲಾಖೆಯ ನಂದಿನಿ, ಹುಜಗೂರು ಅಂಗನವಾಡಿ ಕೇಂದ್ರದ ಉಮಾದೇವಿ ಹಾಜರಿದ್ದರು.