ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪಟಾಕಿ ತ್ಯಜಿಸುವ ಬಗೆಗಿನ ಜಾಗೃತಿ ಕಾರ್ಯಕ್ರಮದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಶಿಕ್ಷಕ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಪಟಾಕಿಗೂ ದೀಪಾವಳಿಗೂ ಅವಿನಾಭಾವ ಸಂಬಂಧವಿದೆ. ಆದರೂ ಪಟಾಕಿಗಳ ಬಳಕೆಯಿಂದಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ಆಧುನಿಕತೆಯ ಸೋಗಿನೊಂದಿಗೆ ಅಬ್ಬರದ ಶಬ್ಧವುಂಟುಮಾಡುವ, ಪರಿಸರವನ್ನು ಮಲಿನಗೊಳಿಸುವ ಪಟಾಕಿಗಳು ಮಾರುಕಟ್ಟೆಗೆ ಬಂದಿದ್ದು ಶಬ್ಧ ಮತ್ತು ವಾಯುಮಾಲಿನ್ಯ ಹೆಚ್ಚುತ್ತಿದೆ. ಅತಿಯಾದ ಶಬ್ಧದಿಂದಾಗಿ ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗುತ್ತಿದ್ದು ಪಟಾಕಿಗಳ ಹಾವಳಿಗೆ ಅನೇಕ ಮಕ್ಕಳು ಬಲಿಯಾಗುತ್ತಿದ್ದಾರೆ. ಪರಿಸರವನ್ನು ಉಳಿಸಿ ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಪಟಾಕಿ ಬಳಕೆಯನ್ನು ತ್ಯಜಿಸಬೇಕು. ಸಾಂಪ್ರದಾಯಿಕ ದೀಪಬೆಳಗಿಸುವ ದೀಪಾವಳಿ ಆಚರಣೆಯೇ ಸೂಕ್ತ ಎಂದರು.
ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ, ಪಟಾಕಿಗಳಿಂದ ಹೊರಬರುವ ವಿಷಕಾರಿ ರಾಸಾಯನಿಕಗಳು, ಹೊರಸೂಸುವ ಹೊಗೆಯು ಶ್ವಾಸಕೋಶ, ಹೃದಯಸಂಬಂಧಿಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಹಸಿರು ಪಟಾಕಿಗಳ ಬಳಕೆ ಸೂಕ್ತವಾದುದು. ಅತಿಶಬ್ಧ, ಮಾಲಿನ್ಯಕಾರಕಗಳನ್ನುಂಟುಮಾಡುವ ಪಟಾಕಿಗಳ ನಿಷೇಧ ಅಗತ್ಯ ಎಂದರು.
ವಿದ್ಯಾರ್ಥಿಗಳು ಮಾನವಸರಪಳಿ ರಚಿಸಿ ಭಿತ್ತಿಪತ್ರ ಹಿಡಿದು ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು. ಶಾಲಾ ಆವರಣದಲ್ಲಿ ದೀಪಗಳನ್ನು ಬೆಳಗಿಸಿ ಸಾಂಪ್ರದಾಯಿಕ ದೀಪಾವಳಿ ಆಚರಿಸಿದರು.
ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಶಿಕ್ಷಕಿ ಎಚ್.ತಾಜೂನ್ ಹಾಜರಿದ್ದರು.