Sidlaghatta : ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಏರಿಕೆ ಕಾಣಲು ಕಾರಣ ತಾಲ್ಲೂಕಿನ ರೈತರ ಒಗ್ಗಟ್ಟಿನ ಹೋರಾಟವೇ ಕಾರಣ. ನೀರನ್ನು ಕೆರೆಗಳಿಗೆ ಹರಿಸಿದ ಫಲವಾಗಿ ಇದೀಗ ಅಂತರ್ಜಲದಲ್ಲಿ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ಉಲ್ಲೂರುಪೇಟೆಯ ರೈತ ಸಂಘದ ನಗರ ಘಟಕದ ಕಚೇರಿಯ ಆವರಣದಲ್ಲಿ ಸೋಮವಾರ ಸಂಜೆ ಸುಗ್ಗಿ ಹಬ್ಬ ಸಂಕ್ರಾಂತಿ ಪ್ರಯುಕ್ತ ರೇಷ್ಮೆ ರೈತ ಆಸಕ್ತ ಗುಂಪುಗಳ ಸದಸ್ಯರಿಗೆ ನೆನಪಿನ ಕಾಣಿಕೆ ಹಾಗೂ ಅತ್ಯುತ್ತಮ ಇಳುವರಿ ಪಡೆದಿರುವ ರೇಷ್ಮೆ ಬೆಳೆಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1,920 ಅಡಿಗಳಷ್ಟು ಆಳದವರೆಗೆ ಕುಸಿದಿದ್ದ ಅಂತರ್ಜಲ ಇದೀಗ 900 ಅಡಿಯವರೆಗೆ ಏರಿಕೆ ಕಂಡಿದೆ. ರೈತ ಸಂಘದ ಹೋರಾಟ ನಿರಂತರವಾದುದು. ರೈತ ಹೋರಾಟ ಕೇವಲ ರೈತರಿಗೆ ಮಾತ್ರ ಸೀಮಿತವಲ್ಲ ಅದೊಂದು ಸಾಮಾಜಿಕ ಹೋರಾಟ. ರೈತರ ಮನೆ ಜಪ್ತಿ ತಡೆದು ಸಾಲ ಮನ್ನಾ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದರಿಂದ ಹಿಡಿದು, ವಿದ್ಯುತ್ ಸಮಸ್ಯೆ, ರಸಗೊಬ್ಬರ ಕೊರತೆ, ರೇಷ್ಮೆ ಗೂಡಿನ ಬೆಲೆ ಕುಸಿತ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಿ ಯಶಸ್ಸು ಕಂಡಿದ್ದೇವೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸಮರ್ಪಕ ಬೆಳೆ ಸಿಗುವಂತಾದಾಗ ಮಾತ್ರ ರೈತರು ನೆಮ್ಮದಿಯ ಬದುಕನ್ನು ಬದುಕಲು ಸಾಧ್ಯ ಎಂದು ಹೇಳಿದರು.
ರೇಷ್ಮೆ ರೈತ ಆಸಕ್ತ ಗುಂಪುಗಳ ಸದಸ್ಯರಿಗೆ ನೆನಪಿನ ಕಾಣಿಕೆ ಹಾಗೂ ಅತ್ಯುತ್ತಮ ಇಳುವರಿ ಪಡೆದಿರುವ ರೇಷ್ಮೆ ಬೆಳೆಗಾರರಾದ ಅಂಗಡಿ ವೆಂಕಟೇಶ, ಪಿ.ವಿ.ದೇವರಾಜ್, ಎಸ್.ಸುರೇಶ್ ಅವರಿಗೆ ಸನ್ಮಾನ ಮಾಡಲಾಯಿತು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ವೇಣುಗೋಪಾಲ್, ಬಿ.ನಾರಾಯಣಸ್ವಾಮಿ, ಬೋದಗೂರು ವೆಂಕಟಸ್ವಾಮಿರೆಡ್ಡಿ, ವೈ.ರಾಮಕೃಷ್ಣಪ್ಪ, ಬುಸ್ನಳ್ಳಿ ದೇವರಾಜ್, ಮೈರಾಡ ಅಧಿಕಾರಿಗಳಾದ ಶಿವಶಂಕರ್, ವೆಂಕಟರೆಡ್ಡಿ ಹಾಜರಿದ್ದರು.