22.1 C
Sidlaghatta
Wednesday, December 4, 2024

ಶ್ರೇಯೋಸ್ತು-2023 ಕಾರ್ಯಕ್ರಮ

- Advertisement -
- Advertisement -

Sidlaghatta : ಓದಿ, ವಿದ್ಯಾವಂತರಾಗಿ, ಪ್ರಜ್ಞಾವಂತ ಪ್ರಜೆಗಳಾಗಿ ಬೆಳೆದ ನಂತರವೂ ಮತ್ತದೇ ಹಿಂದಿನ ಮೌಢ್ಯಗಳಿಗೆ ಅಂಟಿಕೊಳ್ಳುವುದರಿಂದ ಸಮಾಜದಲ್ಲಿ ಯಾವುದೇ ಬದಲಾವಣೆಯಾಗದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ನಗರದ ಹೊರವಲಯದ ಹಂಡಿಗನಾಳ ಗ್ರಾಮದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಎ.ಆರ್‌.ಎಂ ಪಿಯು ಕಾಲೇಜು ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಹಮ್ಮಿಕೊಂಡಿದ್ದ ಶ್ರೇಯೋಸ್ತು-2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಎಪ್ಪತ್ತೈದು ವರ್ಷಗಳ ಹಿಂದೆ ದೇಶ ಹೇಗಿತ್ತೋ ಇಂದಿಗೂ ಅದೇ ರೀತಿಯಿದೆ. ಚಂದ್ರನ ಮೇಲೆ ಉಪಗ್ರಾಹ ಉಡಾವಣೆ ಮಾಡುವಷ್ಟು ಭಾರತ ದೇಶ ಬೆಳೆದಿದೆಯಾದರೂ ಚಂದ್ರಯಾನಕ್ಕೆ ಸಿದ್ದಪಡಿಸಿರುವ ಉಪಗ್ರಹದ ಪ್ರತಿಕೃತಿಯನ್ನು ಇಸ್ರೋ ವಿಜ್ಷಾನಿಗಳು ತಿರುಪತಿ ದೇವಾಲಯಕ್ಕೆ ಕೊಂಡೊಯ್ದು ಪೂಜೆ ಮಾಡಿ ನಂತರ ಉಡಾವಣೆ ಮಾಡುತ್ತಾರೆಂದರೆ ಇದಕ್ಕಿಂತ ವಿಪರ್ಯಾಸ ಬೇರೊಂದಿಲ್ಲ ಎಂದರು.

ಲಕ್ಷಾಂತರ ಕಿ.ಮೀ ದೂರವಿರುವ ಚಂದ್ರ ಗ್ರಹದ ಮೇಲೆ ಉಪಗ್ರಹವನ್ನು ಖಚಿತ ಹಾಗು ನಿಗಧಿತ ಸಮಯದಲ್ಲಿ ಇಳಿಸುವಷ್ಟು ಶಕ್ತಿ, ವಿದ್ಯೆ ಹಾಗೂ ಜ್ಞಾನ ಇದೆಯಾದರೂ ಆತ್ಮ ವಿಶ್ವಾಸವಿಲ್ಲ. ಉಪಗ್ರಹದ ಪ್ರತಿಕೃತಿಗೆ ತಿರುಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದಾಗ ಮಾತ್ರ ವಿಜ್ಞಾನಿಗಳಿಗೆ ಆತ್ಮ ವಿಶ್ವಾಸ ಬರುತ್ತದೆ ಎಂಬ ಮೌಡ್ಯಗಳೆಲ್ಲವನ್ನು ಬಿಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಶೇ 25 ರಷ್ಟು ಸಾಕ್ಷರತೆ ಹಾಗು ಶೇ 75 ರಷ್ಟು ಅನಕ್ಷರತೆ ಇತ್ತು. ಇದೀಗ ಶೇ 75 ರಷ್ಟು ಸಾಕ್ಷರತೆ ಹಾಗು ಶೇ 25 ರಷ್ಟು ಅನಕ್ಷರತೆ ಇದೆಯಾದರೂ ಸಮಾಜದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದಕ್ಕೆಲ್ಲ ನಮ್ಮಲ್ಲಿರುವ ಮೌಡ್ಯ ಆಚರಣೆಯೇ ಕಾರಣ ಎಂದರು.

ಯುವಜನತೆ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದೇ ಸಮಾಜದಲ್ಲಿನ ಆಚಾರ ವಿಚಾರಗಳ ಬಗ್ಗೆ ಅರಿತು ಜೀವನ ನಿರ್ವಹಣೆ ಮಾಡುವುದನ್ನು ಕಲಿಯಬೇಕು ಎಂದರು.

ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಾ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಸಾಕಷ್ಟಿವೆ. ಮಕ್ಕಳು ಕಾಲೇಜು ಹಂತದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದಿನಿಂದಲೇ ತಯಾರಿ ನಡೆಸಬೇಕು. ಈ ಹಂತದಲ್ಲಿ ವಿದ್ಯಾರ್ಥಿಗಳು ಸೂಕ್ತವಾದ ನಿರ್ಧಾರ ಕೈಗೊಂಡು ಮುಂದಿನ ಹೆಜ್ಜೆ ಇಡಬೇಕು ಎಂದರು.

ಇತ್ತೀಚೆಗೆ ನಡೆದ ಐ.ಎಫ್‌.ಎಸ್ ಪರೀಕ್ಷೆಯಲ್ಲಿ 20ನೇ ರ್‍ಯಾಂಕ್ ಪಡೆದ ತಾಲ್ಲೂಕಿನ ತಲದುಮ್ಮನಹಳ್ಳಿಯ ಟಿ.ಎಂ.ಆಕರ್ಷ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು

ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಶ್ರೀ ಶಾರದ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಆರ್.ಮುನಿರತ್ನಂ, ಕಾರ್ಯದರ್ಶಿ ಸುಮನ್, ಹೈಕೋರ್ಟ್ ವಕೀಲ ಪ್ರೊ.ಹರಿರಾಮ್, ಪ್ರಾಂಶುಪಾಲ ಡಾ.ಕೆ.ಮೂರ್ತಿ ಸಾಮ್ರಾಟ್, ಮುಖಂಡರಾದ ಬಿ.ಕೆ.ದ್ಯಾವಪ್ಪ, ದಸಂಸ ಸಂಚಾಲಕ ಟಿ.ಎ.ಚಲಪತಿ, ಎ.ಆರ್.ಎಂ ಪಿಯು ಹಾಗೂ ಶಾರದಾ ವಿದ್ಯಾ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!