Sidlaghatta : ಅರಣ್ಯದಿಂದ ಹೊರ ಬಂದು ಆಕಸ್ಮಿಕವಾಗಿ ನೀರಿಲ್ಲದ ಖಾಲಿ ಕೃಷಿ ಹೊಂಡದಲ್ಲಿ ಬಿದ್ದಿದ್ದ ಕೃಷ್ಣಮೃಗದ ಮರಿಯನ್ನು ರಕ್ಷಿಸಿ ಹೊಂಡದಿಂದ ಮೇಲೆತ್ತಿದ ಜಯಂತಿಗ್ರಾಮದ ವಾಸಿ ನಾರಾಯಣಸ್ವಾಮಿ ಅದಕ್ಕೆ ನೀರು ಮೇವನ್ನು ನೀಡಿ ಆರೈಕೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಸಾದಹಳ್ಳಿ ಗೇಟ್ ಬಳಿ ಇರುವ ನಾರಾಯಣಸ್ವಾಮಿ ಅವರ ಕೃಷಿ ಹೊಂಡಕ್ಕೆ ಸುಮಾರು 4-6 ತಿಂಗಳ ಹೆಣ್ಣು ಮರಿ ಕೃಷ್ಣಮೃಗ ಶನಿವಾರ ಸಂಜೆ ನಂತರ ಬಿದ್ದಿದೆ. ಮಾರನೇ ದಿನ ಭಾನುವಾರ ಬೆಳಗ್ಗೆ ಅಕ್ಕ ಪಕ್ಕದ ತೋಟದವರು ನೋಡಿಕೊಂಡಿದ್ದು ನಾರಾಯಣಸ್ವಾಮಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ನೇಹಿತ ವಿಶ್ವಾಸ್ ಜತೆಗೂಡಿ ನಾರಾಯಣಸ್ವಾಮಿ ಕೃಷಿ ಹೊಂಡಕ್ಕೆ ಇಳಿದು ಕೃಷ್ಣಮೃಗದ ಮರಿಯನ್ನು ರಕ್ಷಿಸಿ ಮನೆಗೆ ಕೊಂಡೊಯ್ದು ಅದಕ್ಕೆ ಹಾಲು ನೀರು ಮೇವು ಕೊಟ್ಟು ಆರೈಕೆ ಮಾಡಿ ನಂತರ ವಲಯ ಉಪ ಅರಣ್ಯಾಕಾರಿ ಜಯಚಂದ್ರ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಗಸ್ತುಪಾಲಕ ಗೋವಿಂದರಾಜು ಸ್ಥಳಕ್ಕೆ ಆಗಮಿಸಿ ಜಿಂಕೆ ಮರಿಯನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.
ಸುಮಾರು 10-12 ಅಡಿಯಷ್ಟು ಆಳವಿರುವ ಕೃಷಿ ಹೊಂಡಕ್ಕೆ ಬಿದ್ದಾಗ ಸಣ್ಣ ಪುಟ್ಟ ಒಂದೆರಡು ಗಾಯಗಳಾಗಿರುವುದು ಬಿಟ್ಟು ಮಿಕ್ಕಂತೆ ಜಿಂಕೆ ಆರೋಗ್ಯವಾಗಿ ಸಹಜವಾಗಿ ಇದ್ದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಯು ಕೃಷ್ಣಮೃಗದ ಮರಿಯನ್ನು ಅಜ್ಜಕದಿರೇನಹಳ್ಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.