Sidlaghatta : ಶಿಡ್ಲಘಟ್ಟದ ಸರ್ಕಲ್ ಇನ್ಸ್ ಪೆಕ್ಟರ್ ನಿರೀಕ್ಷಕ(CPI)ರಾಗಿದ್ದ ನಂದಕುಮಾರ್ ಅವರು ವರ್ಗಾವಣೆ ಆಗಿದ್ದು ಎಂ.ಶ್ರೀನಿವಾಸ್ ಅವರು ಶಿಡ್ಲಘಟ್ಟದ ನೂತನ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರವಹಿಸಿಕೊಂಡ ನಂತರ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಡ್ಲಘಟ್ಟ ನಗರದಲ್ಲಿ ರೇಷ್ಮೆಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹೆಚ್ಚಿದ್ದಾರೆ. ಹಾಗೆಯೆ ಗ್ರಾಮಾಂತರ ಪ್ರದೇಶದಲ್ಲೂ ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೊದಲ ಆಧ್ಯತೆ ನೀಡಲಿದ್ದು ಪೊಲೀಸರೊಂದಿಗೆ ಸಹಕರಿಸಬೇಕೆಂದು ನಾಗರಿಕರನ್ನು ಕೋರಿದರು.
ಜನಸ್ನೇಹಿ ಪೊಲೀಸರಾಗಿ ಕಾರ್ಯನಿರ್ವಹಿಸುವುದಕ್ಕೆ ಮೊದಲ ಆಧ್ಯತೆ ನೀಡಲಿದ್ದೇನೆ. ತಾಲ್ಲೂಕಿನಲ್ಲಿ ಎಲ್ಲಿಯೆ ಆಗಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದರೆ ನೇರವಾಗಿ ನನಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದು.
ಮಾಹಿತಿ ನೀಡಿದವರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದ ಅವರು, ಮೊದಲಿಗೆ ಎಲ್ಲರ ಮೇಲೂ ಕಾನೂನು ದಂಡದ ಪ್ರಯೋಗ ಮಾಡುವುದಿಲ್ಲ. ತಿಳುವಳಿಕೆ ನೀಡುವ ಕೆಲಸ ಮಾಡಿ ನಂತರ ಪೊಲೀಸ್ ಕೆಲಸವನ್ನು ಆರಂಭಿಸುತ್ತೇವೆ ಎಂದರು.