Devaramallur, Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಹಾಲು ಉತ್ಪಾದನೆ ಆಗುತ್ತಿದ್ದು, ನಂದಿನಿ ಹಾಲು ಮತ್ತು ಇತರೆ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ ಎಂದು ಪ್ರಾಥಮಿಕ ಕೃಷಿ ಮತ್ತು ಸಹಕಾರ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಅವರು ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮ ರಥೋತ್ಸವದ ಅಂಗವಾಗಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (KOCHIMUL) ಮತ್ತು ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಉತ್ತಮ ರಾಸುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯು ಕೇವಲ ಉಪ ಕಸುಬಾಗಿ ಉಳಿದಿಲ್ಲ. ಇದು ಒಂದು ಪ್ರಮುಖ ಉದ್ದಿಮೆಯಾಗಿ ವ್ಯಾಪಿಸುತ್ತಿದೆ. ಹಾಗಾಗಿ, ರೈತರು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಹೈನುಗಾರಿಕೆ ಕೈಗೊಂಡು ಹೆಚ್ಚು ಆದಾಯ ಗಳಿಸಬೇಕು ಎಂದು ಮನವಿ ಮಾಡಿದರು.
ಸ್ಥಾನ ಕಳೆದುಕೊಂಡ ಕೋಚಿಮುಲ್:
ಕೋಚಿಮುಲ್ ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಮಾತನಾಡಿ, ನಮ್ಮಲ್ಲಿ ಬಹುತೇಕ ರೈತರು ರೇಷ್ಮೆ ಕೃಷಿ ಮತ್ತು ಸಾಮಾನ್ಯ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಕೈಗೊಂಡಿದ್ದಾರೆ. ಆದರೆ ಕೆಲವರು ಇದನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ನಂತರ ಮೊದಲು ಎರಡನೇ ಸ್ಥಾನದಲ್ಲಿದ್ದ ಕೋಚಿಮುಲ್, ಇದೀಗ ಹಾಸನ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ನಾವು ಮೂರನೇ ಸ್ಥಾನಕ್ಕೆ ಇಳಿದಿದ್ದೇವೆ ಎಂದು ವಿಷಾದಿಸಿದರು.
ಈ ಮೊದಲು ಜಾತ್ರೆಗಳಲ್ಲಿ ಸಾವಿರಾರು ಎತ್ತುಗಳು ಸೇರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರೀಕರಣ ಹೆಚ್ಚಾದ ಕಾರಣ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿ, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಜಾತ್ರೆಗಳಲ್ಲಿ ಜಾನುವಾರುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಶ್ರೀನಿವಾಸ್ ಹೇಳಿದರು.
ವಿಮೆಯ ಮಹತ್ವ ಮತ್ತು ಹಾಲಿನ ಸೇವನೆ:
ಡಾ. ವಿ. ಶ್ರೀನಾಥರೆಡ್ಡಿ (ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು) ಮಾತನಾಡಿ, ಸಾಕಷ್ಟು ರೈತರು ಮಿಶ್ರ ತಳಿಯ ಸೀಮೆ ಹಸುಗಳಿಗೆ ವಿಮೆಯನ್ನು ಮಾಡಿಸಿಲ್ಲ. ಸೀಮೆ ಹಸು ಮೃತಪಟ್ಟರೆ ವಿಮೆ ಹಣವು ರೈತರಿಗೆ ನೆರವಾಗಲಿದೆ. ಬಹುತೇಕ ರೈತರು ತಾವೇ ಉತ್ಪಾದಿಸುವ ಹಾಲನ್ನು ಕುಡಿಯದೆ, ಮಕ್ಕಳಿಗೆ ನೀಡದೇ ಇರುವುದು ಬೇಸರದ ಸಂಗತಿ. ಎಲ್ಲರೂ ನಿತ್ಯ ಹಾಲು ಮತ್ತು ಮೊಟ್ಟೆ ಸೇವಿಸಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಿಶ್ರ ತಳಿ ಸೀಮೆ ಹಸು, ಎಮ್ಮೆ ಹಾಗೂ ನಾಟಿ ಹಸುಗಳ ವಿಭಾಗದಲ್ಲಿ ತಲಾ ಮೂವರಿಗೆ ಬಹುಮಾನ ವಿತರಿಸಲಾಯಿತು.
ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಆನಂದ್, ಗ್ರಾ.ಪಂ. ಅಧ್ಯಕ್ಷೆ ಪವಿತ್ರದೇವರಾಜ್, ಕೋಚಿಮುಲ್ ವಿಸ್ತರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಡೇರಿ ನಿರ್ದೇಶಕರು ಮತ್ತು ರೈತರು ಭಾಗವಹಿಸಿದ್ದರು.








