Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 8 ಹಾಸಿಗೆಗಳ ಡಯಾಲಿಸೀಸ್ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಿ ಎಂದು ಶಾಸಕ ಬಿ.ಎನ್.ರವಿಕುಮಾರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಆಸ್ಪತ್ರೆ ಆವರಣದಲ್ಲಿ 8 ಹಾಸಿಗೆಗಳ ಡಯಾಲಿಸೀಸ್ ಕೇಂದ್ರ ಕಟ್ಟಡ ನಿರ್ಮಿಸಲು ಅಗತ್ಯ ಜಾಗವನ್ನು ಗುರುತಿಸಿ, ಅವರು ಮಾತನಾಡಿದರು.
ಡಯಾಲಿಸೀಸ್ ಕೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಭಾಂಗಣ ಕಟ್ಟಡ ನಿರ್ಮಿಸಲು ನೀಲನಕ್ಷೆ ತಯಾರಿಸಲು ತಿಳಿಸಿದರು.
ಈಗಿರುವ ಡಯಾಲಿಸೀಸ್ ಕೇಂದ್ರದಲ್ಲಿ ಕೇವಲ ಎರಡು ಹಾಸಿಗೆಗಳಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿರುವ ಡಯಾಲಿಸೀಸ್ ರೋಗಿಗಳಿಗೆ ಇಲ್ಲಿ ಸವಲತ್ತು ಸಿಗುತ್ತಿಲ್ಲ. ಹೊರಗೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದು ಅವರೆಲ್ಲರಿಗೂ ಇಲ್ಲೇ ಡಯಾಲಿಸೀಸ್ ಆಗಬೇಕಿದೆ ಎಂದರು.
ಹಾಗೆಯೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಕಟ್ಟಡವೂ ಶಿಥಿಲಗೊಂಡಿದ್ದು ಅದನ್ನು ಕೆಡವಿ, ಡಯಾಲಿಸೀಸ್ ಕೇಂದ್ರ ಕಟ್ಟಡ ಜತೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಟ್ಟಡ, ಸಭಾಂಗಣ ಕಟ್ಟಡವನ್ನು ನಿರ್ಮಿಸಲು ಅಂದಾಜು ವೆಚ್ಚದ ಪಟ್ಟಿ ಕೊಡಿ ಎಂದು ಆರೋಗ್ಯ ಇಲಾಖೆಯ ಇಂಜಿನಿಯರ್ ಸೆಲ್‌ನ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರ, ಸಾಮಾನ್ಯ ವಾರ್ಡ್, ನಿರ್ಮಾಣವಾಗುತ್ತಿರುವ ಪ್ರಯೋಗಾಲಯ ಕಟ್ಟಡವನ್ನು ವೀಕ್ಷಿಸಿದರು.
ಪ್ರಯೋಗಾಲಯ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರಲ್ಲದೆ, ಪ್ರಯೋಗಾಲಯದ ಪರೀಕ್ಷೆಗಳಿಗೆ ಹಾಗೂ ಸಾಕಷ್ಟು ಔಷಧಿಗಳನ್ನು ಹೊರಗೆ ಬರೆದುಕೊಡುತ್ತಿರುವುದರ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಬಳಿ ವಿವರ ಕೇಳಿ, ಅನಿವಾರ್ಯ ಸ್ಥಿತಿ ಬಿಟ್ಟು ಹೊರಗಡೆಗೆ ಔಷಧಿ ಬರೆದುಕೊಡಬೇಡಿ ಎಂದು ತಾಕೀತು ಮಾಡಿದರು.
ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಇಂಜಿನಿಯರ್ ಸೆಲ್‌ನ ಕೋಲಾರ ವಿಭಾಗದ ಎಇ ವಿಕಾಸ್, ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು, ಜೆ.ವಿ.ಸದಾಶಿವ, ಜೆ.ವಿ.ಸುರೇಶ್, ಸಾಧಿಕ್‌ಪಾಷ ಹಾಜರಿದ್ದರು.