Sidlaghatta : ಶಿಡ್ಲಘಟ್ಟ ತಾಲ್ಲೂಕಿನ 30 ಮಂದಿ ರೈತ ಮಹಿಳೆಯರು ಮತ್ತು 11 ಮಂದಿ ರೈತರು, ದೆಹಲಿಯ ಕರ್ನಾಟಕ ಭವನದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಅವರನ್ನು ಭೇಟಿಯಾಗಿ, ಕಾವೇರಿ ನದಿ ನೀರಿನ ಕುರಿತಾಗಿ ಕರ್ನಾಟಕದ ರಿಅತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು, ಪ್ರಧಾನಿಯವರೊಂದಿಗೆ ಮಾತನಾಡಿ ರಾಜ್ಯದ ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ತಾಲ್ಲೂಕಿನ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಅವರ ನೇತೃತ್ವದಲ್ಲಿ ಮಳ್ಳೂರು ಭಾರತಾಂಬೆ ರೈತ ಮಹಿಳಾ ಒಕ್ಕೂಟ, ಕರ್ನಾಟಕ ಪ್ರದೇಶ ಯುವಕ ರೈತ ಸಮಾಜ, ಅಖಿಲ ಭಾರತ ರೈತ ಸಂಘಗಳ ಒಕ್ಕೂಟ ಜೊತೆಗೂಡಿ, ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ 30 ಮಂದಿ ರೈತ ಮಹಿಳೆಯರು ಮತ್ತು 11 ಮಂದಿ ರೈತರು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಅಧ್ಯಯನ ಪ್ರವಾಸಕ್ಕಾಗಿ ಹೋದ ಸಂದರ್ಭದಲ್ಲಿ ಕಾವೇರಿ ನೀರು ಹಂಚಿಕೆ ಕುರಿತಾಗಿ ಮನವಿ ಸಲ್ಲಿಸಿದರು.
“ಹತ್ತು ದಿನಗಳ ಅಧ್ಯಯನ ಪ್ರವಾಸದಲ್ಲಿ ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ತೋದರ್ ಗರ್ ತಾಲ್ಲೂಕಿನ ವಿಶಾಲಪುರ ಗ್ರಾಮದಲ್ಲಿ ಮುರ್ರಾ ಜಾತಿಯ ಎಮ್ಮೆಗಳ ಸಾಕಾಣಿಕೆ ಮತ್ತು ಅಲ್ಲಿನ ಪ್ರಗತಿಪರ ರೈತರ ತೋಟಗಳನ್ನು ವೀಕ್ಷಿಸಿ ಮಾಹಿತಿ ಪಡೆದೆವು. ದೆಹಲಿ, ಆಗ್ರಾ, ಮಥುರಾ, ಕಾಶಿ, ಅಯೋಧ್ಯಾ ಮುಂತಾದ ಸ್ಥಳಗಳನ್ನೆಲ್ಲಾ ನೋಡಿದೆವು. ಪ್ರತಿದಿನ ನಾವು ತೆಗೆದುಕೊಂಡು ಹೋಗಿದ್ದ ಮುದ್ದೆ, ಅವರೆಬೇಳೆ ಸಾರು ಮಾಡಿಕೊಂಡು ತಿಂದಿದ್ದಲ್ಲದೆ, ಅಲ್ಲಿನ ರೈತರಿಗೂ ಅದರ ಸವಿಯನ್ನು ಉಣಬಡಿಸಿದೆವು” ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ಸಿರಿಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಮಳ್ಳೂರು ವನಿತಾ, ಚಾತುರ್ಯ, ಶೈಲಜಾ, ಬೂದಾಳ ರಾಮಾಂಜಿ, ಗೊರಮಡುಗು ಮಂಜುನಾಥ್, ದೇವರಾಜ್, ಸಂಪಂಗಮ್ಮ, ಆನೂರು ವೀರಕೆಂಪಣ್ಣ ಇದ್ದರು.