Sidlaghatta : ಮಾವಿನ ಹಣ್ಣಿನ ಬೆಲೆ ಕುಸಿದರೂ ನಷ್ಟ ಹೊಂದದೆ ಸ್ವಯಂ ಮಾರಾಟ ಮಾಡುವ ಮೂಲಕ ಲಾಭ ಗಳಿಸಿರುವ ರೈತ ಸುರೇಂದ್ರಗೌಡ ಅವರಂತಹ ರೈತರು ಹೆಚ್ಚಾಗಬೇಕು ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದ ಬಳಿ ಆಯ್ದ ಕೆಲವು ರೈತರು ಹಾಗೂ ಅಧಿಕಾರಿಗಳೊಂದಿಗೆ, ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆಸಿದ ಸಂವಾದದಲ್ಲಿ ಪಾಲ್ಗೊಂಡು ಅವರು, ರೈತರಿಗೆ ಉತ್ಸಾಹ ತುಂಬುವಂತಹ ಮಾದರಿ ರೈತರ ಪರಿಚಯ ಹಾಗೂ ಅವರು ಅಳವಡಿಸಿಕೊಂಡ ವಿಧಾನ ಇತರರಿಗೂ ಆಗಬೇಕು ಎಂದರು.
ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ರೈತ ಸುರೇಂದಗೌಡ ಮಾತನಾಡಿ, ಇಮಾಮ್ ಪಸಂದ್ ಮಾವಿನ ಹಣ್ಣನ್ನು ನಮ್ಮ ತೋಟದಲ್ಲಿ ಬೆಳೆದಿರುವೆ. ಮರದಲ್ಲಿ ಸುಮಾರು 200 ಗ್ರಾಂ ತೂಗುವಾಗ, ಒಂದೊಂದು ಹಣ್ಣಿಗೂ ಬ್ಯಾಗ್ ಕಟ್ಟುತ್ತೇವೆ. ಇದರಿಂದ ಹೂಜಿ ನೊಣಗಳಿಂದ ಸಂರಕ್ಷಣೆ, ಆಲಿಕಲ್ಲು ಮಳೆಯಿಂದ ರಕ್ಷಣೆ ಸಿಗುತ್ತದೆ. ಪೂರ್ತಿ ಬೆಳೆದ ಹಣ್ಣಿನ ಬ್ಯಾಗ್ ತೆಗೆದಾಗ ಹಣ್ಣು ಯಾವುದೇ ಕಲೆಯಿಲ್ಲದೆ, ಹೊಳಪಿನಿಂದ ಕೂಡಿರುತ್ತದೆ. ಒಂದೊಂದು ಹಣ್ಣೂ ಸುಮಾರು ಒಂದು ಕೇ.ಜಿ.ತೂಗುತ್ತದೆ. ಸಹಜವಾಗಿ ಹಣ್ಣು ಮಾಡಿ, ಒಂದು ಕೇಜಿಗೆ 200 ರೂಗಳಂತೆ ಸ್ವಯಂ ಮಾರಾಟ ಮಾಡಿ ಲಾಭ ಗಳಿಸಿರುವುದಾಗಿ ತಿಳಿಸಿದರು.
ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಡಾ. ಹಿತ್ತಲಮನಿ, ಜಯಚಂದ್ರ ಮತ್ತು ಉಪನಿರ್ದೇಶಕಿ ಗಾಯಿತ್ರಿ ಅವರ ಮಾರ್ಗದರ್ಶನದಲ್ಲಿ ಹಣ್ಣು ಮಾಗಿಸುವಿಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಮಾಡುತ್ತಿದ್ದೇವೆಂದು ಹೇಳಿದರು.
ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ ಮಾತನಾಡಿ, ನಾವು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ನಮ್ಮ ಮಕ್ಕಳು ಸಹ ಕೃಷಿಯನ್ನೆ ನಂಬಿ ಕೋಳಿಸಾಕಾಣಿಕೆ, ಹೈನುಗಾರಿಕೆ, ಸಮಗ್ರಕೃಷಿ ಅಳವಡಿಸಿಕೊಂಡಿರುವುದರಿಂದ ಈಗ ನಮ್ಮ ಮಕ್ಕಳಿಗೆ ಯಾರು ಹೆಣ್ಣು ನೀಡುತ್ತಿಲ್ಲ ಎಂದು ತಮ್ಮ ಕಷ್ಟವನ್ನು ವಿವರಿಸಿದರು.
ರೈತ ಚಂದಪ್ಪ ಮಾತನಾಡಿ, ರಸಗೊಬ್ಬರ ಬೆಲೆಗಳಲ್ಲಿ ಡಿಎಪಿ ಮತ್ತು ಯೂರಿಯಾ ಕಡಿಮೆ ಧರ ಇದ್ದು ಉಳಿದ ಗೊಬ್ಬರಗಳು ಹೆಚ್ಚಾಗಿವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಂದು ಸಚಿವರ ಗಮನ ಸೆಳೆದರು. ಇದರ ಬಗ್ಗೆ ಒಂದು ಪತ್ರವನ್ನು ನಮ್ಮ ಸಚಿವಾಲಯಕ್ಕೆ ಕಳುಹಿಸಬೇಕೆಂದು ಸಚಿವರು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಪಾಪಿರೆಡ್ಡಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿ ಬರುವ ಕೃಷಿ ಸಂಶೋಧನಾ ಅಳವಡಿಕೆ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವೆಂಕಟಸುಬ್ರಮಣಿಯನ್, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ತುಶಾರ್ ಕ್ರಾಂತಿ ಬೆಹೆರ, ರಾಷ್ಟ್ರೀಯ ಮಣ್ಣಿನ ಸಮೀಕ್ಷೆ ಮತ್ತು ಭೂ ಬಳಕೆ ಯೋಜನೆ ಬ್ಯೂರೋ ನಿರ್ದೇಶಕ ಡಾ. ರಾಮಮೂರ್ತಿ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಜಂಟಿನಿರ್ದೇಶಕ ಡಾ. ಪಲ್ಲಭ ಚೌದರಿ ಹಾಜರಿದ್ದರು.