Belluti, Sidlaghatta, chikkaballapur : “ಈ ಸಮಾಜ ಮತ್ತು ಸರ್ಕಾರವು ವಿದ್ಯಾರ್ಥಿ ಮತ್ತು ಯುವ ಜನರ ಮೇಲೆ ಅಪಾರ ನಿರೀಕ್ಷೆ ಇಟ್ಟಿದೆ. ಈ ಜಗತ್ತಿನಲ್ಲಿ ಬದಲಾವಣೆ, ಪ್ರಗತಿ ಅಥವಾ ಕ್ರಾಂತಿ ಆಗಬೇಕೆಂದರೆ ಅದು ವಿದ್ಯಾರ್ಥಿಗಳಿಂದಲೇ ಸಾಧ್ಯ” ಎಂದು ಚಿಕ್ಕಬಳ್ಳಾಪುರದ ಶ್ರೀ ಶೃಂಗೇರಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಲ್ ಎಚ್.ಎಂ. ಚನ್ನಕೃಷ್ಣಪ್ಪ ಹೇಳಿದರು.
ಬೆಳ್ಳೂಟಿ ಗೇಟ್‌ನ ಶ್ರೀಗುಟ್ಟ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಶೃಂಗೇರಿ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಸಮುದಾಯ ಸಹಬಾಳ್ವೆ ಶಿಬಿರ”ದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟುವ ಜತೆಗೆ ದೇಶದ ಭವಿಷ್ಯವನ್ನೂ ರೂಪಿಸಬೇಕು. ಶಾಲಾ-ಕಾಲೇಜು ಹಂತದಲ್ಲೇ ಭದ್ರ ಬುನಾದಿ ಅಗತ್ಯ. ಆಲೋಚನೆ ಸ್ಪಷ್ಟವಾಗಿರಬೇಕು, ಗುರಿ ನಿಶ್ಚಿತವಾಗಿರಬೇಕು,” ಎಂದು ಅವರು ಸಲಹೆ ನೀಡಿದರು.
ಅವರು ಮುಂದುವರೆದು — “ಓದು, ಉದ್ಯೋಗ, ಸಂಬಳದಲ್ಲಿ ಸೀಮಿತವಾಗದೆ ಪ್ರಾಪಂಚಿಕ ಹಾಗೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಅರಿವು ಇರಬೇಕು. ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸುವುದು ವಿದ್ಯಾರ್ಥಿಗಳ ಕರ್ತವ್ಯ,” ಎಂದರು.
ಅಂತೆಯೇ “ಸಮುದಾಯ ಸಹಬಾಳ್ವೆ ಶಿಬಿರ”ವು ಹಳ್ಳಿಗಾಡಿನ ಜೀವನವನ್ನು ಅರ್ಥಮಾಡಿಕೊಳ್ಳಲು, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸಲು ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಲೋಕನಾಥ್, ನಿರ್ದೇಶಕ ಎನ್. ದೀರೇಶ್ ಕುಮಾರ್, ವೈ.ಎನ್. ಗೋಪಾಲ್, ರಾಧಾ ಗೋಪಾಲ್, ಶಿಡ್ಲಘಟ್ಟ ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ಎಚ್.ಕೆ. ಸುರೇಶ್, ಸಹಾಯಕ ಪ್ರಾಧ್ಯಾಪಕ ಕೆ. ಮುನಿಶಾಮಪ್ಪ, ಎಸ್.ಎಚ್. ಹಾಲೇಶಪ್ಪ, ಎಂ. ಮಹೇಶ್ ಕುಮಾರ್ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366









